ಬೆಂಗಳೂರು: ಕಳೆದ ವರ್ಷವಷ್ಟೇ ಸರಗಳ್ಳರು, ಕೊಲೆಗಡುಕರು, ರೌಡಿಶೀಟರ್‌ಗಳು ಸೇರಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ 33 ಆರೋಪಿಗಳ ಮೇಲೆ ಗುಂಡು ಹಾರಿಸಿದ್ದ ನಗರ ಪೊಲೀಸರು, ಹೊಸ ವರ್ಷದ ಆರಂಭದಲ್ಲೇ “ಗುಂಡಿನ ಬೇಟೆ’ ಆರಂಭಿಸಿದ್ದಾರೆ. ವರ್ಷಾರಂಭದಲ್ಲೇ ರಿವಾಲ್ವರ್‌ಗೆ ಕೆಲಸ ಕೊಟ್ಟಿರುವ ಪೊಲೀಸರು, ಬಂಧಿಸಲು ತೆರಳಿದ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ವಿನೋಬ ನಗರದ ತಬ್ರೇಜ್ ಅಲಿಯಾಸ್ ಬಿಲ್ವಾರ್ (27) ಬಂಧಿತ. ಆರೋಪಿ ಹಲ್ಲೆಯಿಂದ ಗಾಯಗೊಂಡ ಹೆಡ್ ಕಾನ್‌ಸ್ಟೆಬಲ್ ಶಿವಕುಮಾರ್ ಕೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.
ಕೆ.ಜಿ.ಹಳ್ಳಿ ಠಾಣೆಯ ರೌಡಿಶೀಟರ್ ತಬ್ರೇಜ್ ವಿರುದ್ಧ ನಂದಿನಿ ಲೇಔಟ್, ಬೊಮ್ಮನಹಳ್ಳಿ, ಕೆ.ಆರ್.ಪುರ, ಕೊಡಿಗೇಹಳ್ಳಿ, ಬಾಣಸವಾಡಿ, ಗಂಗಮ್ಮನಗುಡಿ ಸೇರಿ ನಗರದ ವಿವಿಧ ಠಾಣೆಗಳಲ್ಲಿ 22ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಕೋರ್ಟ್ ವಾರೆಂಟ್ ಕೂಡ ಜಾರಿ ಮಾಡಿತ್ತು. ಕೆಲ ಪ್ರಕರಣಗಳಲ್ಲಿ ಈತ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದರು.
ಇತ್ತೀಚೆಗೆ ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಈತನ ಉಪಟಳ ಹೆಚ್ಚಾಗಿತ್ತು. ಹೀಗಾಗಿ ಈತನ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದರು. ಇದೇ ವೇಳೆ ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಕೆ.ಜಿ.ಹಳ್ಳಿಯ ಎಚ್‌ಆರ್‌ಬಿ ಲೇಔಟ್‌ನ ಅರಣ್ಯ ಕಚೇರಿ ಬಳಿ ತಬ್ರೇಜ್ ಓಡಾಡುತ್ತಿರುವ ಮಾಹಿತಿ ಸಂಗ್ರಹಿಸಿದ ಇನ್‌ಸ್ಪೆಕ್ಟರ್ ಪ್ರದೀಪ್, ತಮ್ಮ ಸಿಬ್ಬಂದಿ ಜತೆ ಆರೋಪಿ ಬಂಧನಕ್ಕೆ ತೆರಳಿದ್ದರು.
ಹಲ್ಲೆಗೆ ಯತ್ನ: ಪೊಲೀಸರನ್ನು ಕಂಡ ಆರೋಪಿ ಅವರ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಇನ್‌ಸ್ಪೆಕ್ಟರ್ ಪ್ರದೀಪ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ತಬ್ರೇಜ್ ಓಡಿ ಹೋಗಲು ಯತ್ನಿಸಿದ್ದಾನೆ.
ಕೂಡಲೇ ಹೆಡ್‌ಕಾನ್‌ಸ್ಟೆಬಲ್ ಶಿವಕುಮಾರ್ ತಬ್ರೇಜ್‌ನ ಹಿಂದೆಬಿದ್ದಿದ್ದಾರೆ. ಆಗ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ಶಿವಕುಮಾರ್ ಕೈಗೆ ಹಲ್ಲೆ ನಡೆಸಿದ್ದು, ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಹಾರಿಸಿದ ಎರಡು ಗುಂಡುಗಳ ಪೈಕಿ ಒಂದು ತಬ್ರೇಜ್ ಬಲಗೈ ಮತ್ತೂಂದು ಗುಂಡು ಬಲಗಾಲಿಗೆ ತಗುಲಿದೆ. ಗಾಯಗೊಂಡ ಆರೋಪಿಯನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.