Advertisement

ಓಟದ ಜಗತ್ತಿನ ಧ್ರುವತಾರೆ ಬೋಲ್ಟ್  ದುರಂತ ವಿದಾಯ

12:27 PM Aug 14, 2017 | Team Udayavani |

ಲಂಡನ್‌: ವಿಶ್ವ ಕ್ರೀಡಾಲೋಕ ಕಂಡ ಅಸಾಮಾನ್ಯ ಸಾಧಕ, ಅದರಲ್ಲೂ ಓಟದ ಜಗತ್ತಿನ ಧ್ರುವ ತಾರೆ ಎನಿಸಿಕೊಂಡ ಜಮೈಕಾದ ಉಸೇನ್‌ ಬೋಲ್ಟ್ ಅವರ  ಕ್ರೀಡಾಬದುಕಿನ ಅಂತ್ಯ ದುರಂತವಾಗಿತ್ತು ಎಂದರೆ ನಂಬುವುದು ಕಷ್ಟ. ಆದರೆ ನಂಬಲೇಬೇಕಿದೆ. 

Advertisement

ಶನಿವಾರ ತಡರಾತ್ರಿ (ಭಾರತೀಯ ಕಾಲಮಾನ) ನಡೆದ ವಿಶ್ವ ಆ್ಯತ್ಲೆಟಿಕ್ಸ್‌ ಕೂಟದ 4×400 ಮೀ. ರಿಲೇಯಲ್ಲಿ ಕೊನೆಯವರಾಗಿ ಓಡಿದ ಬೋಲ್ಟ್, ಮಂಡಿ ನರಗಳು ಹಿಡಿದುಕೊಂಡ ಪರಿಣಾಮ ಟ್ರ್ಯಾಕ್‌ನಲ್ಲೇ ಕುಸಿದುಬಿದ್ದರು. ಅಲ್ಲಿಯವರೆಗೆ ಬೋಲ್ಟ್ ರತ್ತಲೇ ಗಮನ ಕೇಂದ್ರೀಕರಿಸಿದ್ದ ಕ್ರೀಡಾಜಗತ್ತು ಇಲ್ಲಿಂದ ಮುಂದೆ ಚಿನ್ನಕ್ಕಾಗಿ ಮುನ್ನುಗ್ಗಿದ ಬ್ರಿಟನ್‌ ಆ್ಯತ್ಲೀಟ್‌ಗಳತ್ತ ತಿರುಗಿತು. ಬೋಲ್ಟ್ಗೆ ಸಿಗಬೇಕಾದ ಧೀರೋಚಿತ ವಿದಾಯ ಸಿಗಲಿಲ್ಲ. ಆಗ ಬರೀ ಬೋಲ್ಟ್ ಕಣ್ಣಲ್ಲಿ ಮಾತ್ರವಲ್ಲ, ಕೋಟ್ಯಂತರ ಅಭಿಮಾನಿಗಳ ಕಣ್ಣಲ್ಲೂ ನೀರು ಜಿನುಗಿತು.

ಹೇಗಾಯ್ತು ಅಂತ್ಯ?: ಜಮೈಕಾದ 4 ಮಂದಿಯ ರಿಲೇ ತಂಡ 4×400 ಮೀ.ನಲ್ಲಿ ಚಿನ್ನಕ್ಕಾಗಿ ಓಡಿತ್ತು. ಬೋಲ್ಟ್ 4ನೇಯವರಾಗಿ ದಂಡ ಹಿಡಿದು ಓಡಬೇಕಿತ್ತು. 3ನೇ ಸುತ್ತು ಮುಗಿಸಿದ ಯೊಹಾನ್‌ ಬ್ಲೇಕ್‌ ದಂಡವನ್ನು ಬೋಲ್ಟ್ ಕೈಗೆ ದಾಟಿಸಿದರು. ಆಗ ಜಮೈಕಾ ತಂಡ ಬ್ರಿಟನ್‌ಗಿಂತ 3 ಮೀ. ಹಿಂದಿತ್ತು. ದಂಡ ಹಿಡಿದು ಓಡಲು ಆರಂಭಿಸಿದ ಬೋಲ್ಟ್ ಕೆಲವು ಹೆಜ್ಜೆ ಓಡುವಷ್ಟರಲ್ಲೇ ಅವರ ಎಡ ಕಾಲಿನ ಮಂಡಿಯ ನರಗಳು ಬಿಗಿದುಕೊಂಡವು. ಅಲ್ಲೇ ಕುಸಿದು ಬಿದ್ದರು. ಅನಂತರ ಅವರನ್ನು ಸಹ ಆಟಗಾರ ಹಿಡಿದೆತ್ತಿ ಸಾಂಕೇತಿಕವಾಗಿ ಗುರಿ ಮುಟ್ಟಿಸಿದರು. ಆಗ ಬೋಲ್ಟ್ ಮುಖವನ್ನು ಮಂಡಿಯಲ್ಲಿ ಹುದುಗಿಸಿ ಕೂತಿದ್ದರು. ಈ ಮೂಲಕ ತಂಡ ವಿಭಾಗದಲ್ಲೂ ಬೋಲ್ಟ್ ತಮ್ಮ ಓಟಕ್ಕೆ ವಿದಾಯ ಹೇಳಿದರು.

ಓಟದಲ್ಲಿ 19 ಚಿನ್ನ: ವಿಶ್ವಮಟ್ಟದಲ್ಲಿ ಬೋಲ್ಟ್ ತಮ್ಮ ಸಾಧನೆಯಿಂದ ಶಾಶ್ವತ ಹೆಸರು ಪಡೆದಿದ್ದಾರೆ. ಅವರು ಗೆದ್ದಿರುವುದು ಒಟ್ಟು 21 ಪದಕ. ಅದರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 11, ಒಲಿಂಪಿಕ್ಸ್‌ನಲ್ಲಿ 8 ಸೇರಿ ಒಟ್ಟು 19 ಚಿನ್ನವೇ ಇದೆ. 100 ಮೀ., 200 ಮೀ. ವಿಶ್ವದಾಖಲೆಯೂ ಅವರ ಹೆಸರಲ್ಲೇ ಇದೆ. ಇಂತಹ ಒಂದು ಸಾಧನೆ ಈ ಹಿಂದೆ ವಿಶ್ವದ ಯಾವುದೇ ಆ್ಯತ್ಲೀಟ್‌ ಕೂಡ ಮಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next