ನವದೆಹಲಿ: ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಸ್ವಯಂ ಆಗಿ ಭಾರತದೊಳಕ್ಕೆ ವಿಲೀನವಾಗಲಿದೆ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:Asia Cup 2023; ’15 ವರ್ಷಗಳಲ್ಲೇ ಇದೇ ಮೊದಲು….’: ಲಂಕಾ ಪಂದ್ಯಕ್ಕೆ ಮೊದಲು ವಿರಾಟ್ ಮಾತು
ಪಿಒಕೆಯನ್ನು ಭಾರತದೊಳಕ್ಕೆ ವಿಲೀನಗೊಳಿಸಬೇಕೆಂಬ ಜನರ ಬೇಡಿಕೆ ಕುರಿತು ಭಾರತೀಯ ಜನತಾ ಪಕ್ಷದ ನಿಲುವು ಏನು ಎಂಬ ಕುರಿತು ಕೇಳಿದ ಪ್ರಶ್ನೆಗೆ ವಿ.ಕೆ.ಸಿಂಗ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಸ್ಥಾನದ ದೌಸಾದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಕೆ ಸಿಂಗ್, ಚೀನಾ ಬಿಡುಗಡೆಗೊಳಿಸಿರುವ ನೂತನ ನಕ್ಷೆಯಲ್ಲಿ ಕಾಶ್ಮೀರದ ಅಕ್ಸಾಯ್ ಚಿನ್ ಮತ್ತು ಅರುಣಾಚಲ ಪ್ರದೇಶವನ್ನು ತನ್ನ ಭೂಭಾಗ ಎಂದು ನಮೂದಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಸರ್ಕಾರ ಕೂಡಾ ಸಮರ್ಥಿಸಿಕೊಂಡಿದೆ. ಈ ನಿಟ್ಟಿನಲ್ಲಿ ಪಿಒಕೆ ಕೆಲವು ವರ್ಷಗಳಲ್ಲಿ ಭಾರತದೊಂದಿಗೆ ವಿಲೀನಗೊಳ್ಳಲಿದೆ ಎಂದು ಸಿಂಗ್ ಪುನರುಚ್ಚರಿಸಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಗೋವಾದಲ್ಲಿ ನಡೆದ ಎಸ್ ಸಿಒ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಅವರು, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಬಗ್ಗೆ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಸಮ್ಮುಖದಲ್ಲೇ ತರಾಟೆಗೆ ತೆಗೆದುಕೊಂಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.