ಬೆಂಗಳೂರು: ಮಹದೇವಪುರದ ಫಿನಿಕ್ಸ್ ಮಾಲ್‌ನಲ್ಲಿ ಗುರುವಾರ ವಿಷಪೂರಿತ ರಸಾಯನಿಕ ಹಾಗೂ ಪರಮಾಣು ಸೋರಿಕೆಯಾಗಿತ್ತು! ಕೆಲವೇ ನಿಮಿಷಗಳಲ್ಲಿ ಜನರು ದಿಕ್ಕಾಪಾಲಾಗಿ ಓಡಿದರು. ಭದ್ರತಾ ಸಿಬ್ಬಂದಿಯೂ ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು.
ಮಾಹಿತಿ ತಿಳಿದ ಕೆಲಹೊತ್ತಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ದೌಡಾಯಿಸಿ, ರಸಾಯನಿಕ ಸೋರಿಕೆ ವಿಫಲಗೊಳಿಸಲು ಕಾರ್ಯಾಚರಣೆ ಶುರುಮಾಡಿತು. ರಸಾಯನಿಕ ಸೇವಿಸಿ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ಗಂಟೆಗೂ ಅಧಿಕ ಕಾಲ ನಡೆದ ಕಾರ್ಯಾಚರಣೆ ಬಳಿಕ ಎಲ್ಲರೂ ನಿಟ್ಟುಸಿರು ಬಿಟ್ಟರು.
ಅದು ಅಣಕು ಪ್ರದರ್ಶನ: ವಿಷಪೂರಿತ ರಸಾಯನಿಕ, ಪರಮಾಣು, ಜೈವಿಕ ಇಂಧನಗಳು ಸೋರಿಕೆ ಆದರೆ ಅಥವಾ ದಾಳಿ ನಡೆದರೆ ಯಾವ ರೀತಿ ಸಾರ್ವಜನಿಕರು ಸ್ಪಂದಿಸಬೇಕು, ರಕ್ಷಣಾ ಕಾರ್ಯ ಹೇಗೆ ನಡೆಯಲಿದೆ ಎಂದು ಎನ್‌ಡಿಆರ್‌ಎಫ್ ತಂಡ ನಡೆಸಿಕೊಟ್ಟ ಅಣಕು ಪ್ರದರ್ಶನದಲ್ಲಿ ಕಂಡು ಬಂದ ಚಿತ್ರಣವಿದು.
ಭಾರೀ ಜನರು ಸೇರುವ ಮಾಲ್‌ಗಳಲ್ಲಿ ಈ ರೀತಿಯ ದಾಳಿಗಳು ನಡೆದರೆ ಹೇಗೆ ಪರಿಸ್ಥಿತಿ ನಿಭಾಯಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಡೆದ ಅಣಕು ಕಾರ್ಯಾಚರಣೆಯಲ್ಲಿ ರಾಜ್ಯ ಅಗ್ನಿಶಾಮಕ ದಳ ಹಾಗೂ ರಾಜ್ಯ ಸಿವಿಲ್ ಡಿಫೆನ್ಸ್ ತಂಡದವರು ಪಾಲ್ಗೊಂಡಿದ್ದರು.
ಅಣಕು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಎನ್‌ಡಿಆರ್‌ಎಫ್ನ ಅಸಿಸ್ಟೆಂಟ್ ಕಮಾಂಡೆಂಟ್ ಕೆ.ಎಸ್ ಸುಭೀಶ್ ಮಾತನಾಡಿ, ಮಾಲ್‌ಗಳಲ್ಲಿ ಸಹಸ್ರಾರು ಸಂಖ್ಯೆಯ ಜನರು ಸೇರುತ್ತಾರೆ. ಹೀಗಾಗಿ, ಮಾಲ್‌ನ ಸಿಬ್ಬಂದಿ ಹಾಗೂ ಸಾರ್ವಜನಿಕರು ರಾಸಾಯನಿಕ ದಾಳಿ ನಡೆದರೆ ಯಾವ ರೀತಿ ಸ್ಪಂದಿಸಬೇಕು.
ಹೀಗಾಗಿ ಮಾಲ್‌ಗಳಲ್ಲಿ ಅಣಕು ಪ್ರದರ್ಶನ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಕೂಡ ಇದರ ಬಗ್ಗೆ ಜಾಗೃತಿ ಮೂಡಿಸು ಉದ್ದೇಶ ಇದಾಗಿದೆ ಎಂದು ಕರಪತ್ರಗಳನ್ನು ಹಂಚಲಾಗಿದೆ ಎಂದು ತಿಳಿಸಿದರು.
ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರು
-ಎನ್‌ಡಿಆರ್‌ಎಫ್ – 35 ಸಿಬ್ಬಂದಿ
-ಪೊಲೀಸರು – 25
-ಅಗ್ನಿಶಾಮಕ ದಳ -25
-ಸಿವಿಲ್ ಡಿಫೆನ್ಸ್ -10
-ವೈದ್ಯಕೀಯ ಸಿಬ್ಬಂದಿ -10
-ಮಾಲ್ ಭದ್ರತಾ ಸಿಬ್ಬಂದಿ -75
-ಮಾಲ್‌ನ ಆಡಳಿತ ಸಿಬ್ಬಂದಿ -10
-ಮಾಲ್‌ನ ಶಾಪ್‌ಗ್ಳ ಸಿಬ್ಬಂದಿ -140
-ಸಾರ್ವಜನಿಕರು -500