Advertisement

ಕಾವ್ಯಕ್ಕಿದೆ ಸಮಸ್ಯೆಗೆ ಸ್ಪಂದಿಸುವ ಗುಣ

12:49 PM Feb 27, 2018 | |

ಬೀದರ: ಕಾವ್ಯ ಬರೀ ಶಬ್ದಗಳ ಸರಮಾಲೆಯಲ್ಲ, ಸಮಕಾಲೀನ ಸಮಸ್ಯೆಗಳಿಗೆ ಆಗಾಗಲೇ ಸ್ಪಂದಿಸುವ ಗುಣ ಹೊಂದಿರುತ್ತದೆ ಎಂದು ಕಲಬುರಗಿಯ ಸಹಪ್ರಾಧ್ಯಾಪಕ ಡಾ| ಸೂರ್ಯಕಾಂತ ಸುಜಾತ ಹೇಳಿದರು.

Advertisement

ನಗರದ ಜೈನ ಮಂದಿರ ಸಭಾಂಗಣದಲ್ಲಿ ಪ್ರಭುರಾವ್‌ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನ ಏರ್ಪಡಿಸಿದ್ದ 90ನೇ ಸಾಹಿತ್ಯ-ಸಂಸ್ಕೃತಿ ಚಿಂತನೆಯ ಮಾಸಿಕ ಕಾರ್ಯಕ್ರಮದಲ್ಲಿ “ಭೀಮಶೇನ ಗಾಯಕವಾಡರ ಬದುಕು ಬರಹ’ ಕುರಿತು ಅವರು ಉಪನ್ಯಾಸ ನೀಡಿದರು.

ಬುದ್ಧ ಬಸವ ಅಂಬೇಡ್ಕರರ ವೈಚಾರಿಕತೆ ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಚಿಂತನೆಗಳಿಂದ ಪ್ರಭಾವಿತಗೊಂಡು ವೃತ್ತಿಯೊಂದಿಗೆ ಸಾಹಿತ್ಯ ಕೃಷಿಯನ್ನು ರೂಢಿಸಿಕೊಂಡಿರುವ ಭೀಮಶೇನ್‌ ತಮ್ಮ ಹಾಗೂ ತಮ್ಮವರ ಶತಮಾನದ ನೋವುಗಳಿಗೆ ಕಾವ್ಯರೂಪ ನೀಡಿದ್ದಾರೆ ಎಂದರು. ಸಾವಿರಾರು ವರ್ಷಗಳಿಂದಲೂ ದಲಿತರು ಅನುಭವಿಸುತ್ತಿರುವ ನೋವು ನಲಿವುಗಳನ್ನು ಅಕ್ಷರ ಪಾತಳಿಗಿಳಿಸುವ ಕಾರ್ಯವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿರುವ ಭೀಮಶೇನ್‌ ಗಾಯಕವಾಡರ ಬರಹವು ವೈಶಿಷ್ಟ್ಯದಿಂದ ಕೂಡಿದೆ. “ನಲಿದಾಡಿ ಹೊಳೆಯುವ ಮುತ್ತಗಳೆ’ “ಬುದ್ಧನೊಲುಮೆಯ ಆಧುನಿಕ ವಚನಗಳು’ “ಬೆಸಗರಹಳ್ಳಿ ರಾಮಣ್ಣನವರ ಕಥೆಗಳು’ “ಸಮರಸಜೀವಿ’ಯಂತಹ ಮೌಲಿಕ ಕೃತಿ ನೀಡಿರುವ ಅವರ ಸಂಶೋಧನೆ, ಕಾವ್ಯ, ಆಧುನಿಕ ವಚನ ಸಾಹಿತ್ಯ, ಸಂಪಾದನೆಗಳೆಲ್ಲ ಅತ್ಯಂತ ಪ್ರಗತಿಪರ ಆಲೋಚನೆಗಳನ್ನು ಒಳಗೊಂಡಿವೆ ಎಂದು ಪ್ರತಿಪಾದಿಸಿದರು.

ಭೀಮಶೇನ್‌ ಗಾಯಕವಾಡ ಮಾತನಾಡಿ, ಬುದ್ಧನ ಸಮಾನತೆ, ಬಸವಣ್ಣನ ಸಹೋದರತೆ, ಅಂಬೇಡ್ಕರರ ಸ್ವಾತಂತ್ರ್ಯ, ವಿವೇಕಾನಂದರ ವಿಶ್ವಭ್ರಾತೃತ್ವ, ಕನಕದಾಸರ ಅಂಬಿಗರ ಚೌಡಯ್ಯನವರ ವೈಚಾರಿಕ ಚಿಂತನೆ ಮತ್ತು ಸಮಾನತೆಯ ತತ್ವಗಳು ನನ್ನ ಬರಹಕ್ಕೆ ಬುನಾದಿಯಾಗಿವೆ. ವೈಜ್ಞಾನಿಕ ಮತ್ತು ವೈಚಾರಿಕ ನಿಲುವುಗಳನ್ನು ಪ್ರತಿಪಾದಿಸುವ ಸಲುವಾಗಿಯೇ ನಾನು ಬರವಣಿಗೆ ಪ್ರಾರಂಭಿಸಿದ್ದೇನೆ ಎಂದು ಹೇಳಿದರು.

ಪ್ರತಿಷ್ಠಾನದ ಅಧ್ಯಕ್ಷ ನಾಗಶೆಟ್ಟಿ ಧರಂಪೂರ ಮಾತನಾಡಿ, ಇಂದಿನ ಸಾಹಿತಿ, ಕಲಾವಿದ, ಸಂಘಟಕರಿಗೆ ಮಾರ್ಗದರ್ಶಿಯಾಗಬಲ್ಲ ಕಾರ್ಯಕ್ರಮಗಳನ್ನು ಈ ಪ್ರತಿಷ್ಠಾನ ಹಮ್ಮಿಕೊಳ್ಳುತ್ತ ಬಂದಿದೆ. ಇದನ್ನು ನಮ್ಮವರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಹಿಳಾ ಚಿಂತಕಿ ವಿಜಯಾ ದಬ್ಬೆ ಮತ್ತು ಬಹುಭಾಷಾ ಚಿತ್ರನಟಿ ಶ್ರೀದೇವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರತಿಷ್ಠಾನದಿಂದ ಭೀಮಶೇನ್‌ ಗಾಯಕವಾಡ ಅವರಿಗೆ ಕಾವ್ಯ ಚೈತನ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಸಿದ್ರಾಮಪ್ಪ ಮಾಸಿಮಾಡೆ, ಬಂಡೆಪ್ಪ ಖುಬಾ, ಡಾ| ವಿ.ಜಿ. ಭಂಡೆ, ಚಂದ್ರಪ್ಪ ಹೆಬ್ಟಾಳಕರ್‌, ಹಂಸಕವಿ, ಡಾ| ಗವಿಸಿದ್ಧಪ್ಪ ಪಾಟೀಲ, ವಿಜಯಕುಮಾರ ಸೋನಾರೆ, ಸಂಜೀವಕುಮಾರ ಅತಿವಾಳೆ, ದೇಶಾಂಶ ಹುಡಗಿ, ಎಂ.ಜಿ. ಗಂಗನಪಳ್ಳಿ, ಶಾಮರಾವ್‌ ನೆಲವಾಡೆ, ಶಾಂತಕುಮಾರ ಉದಗಿರೆ, ಎಸ್‌.ಬಿ. ಕೇಸ್ಕರ, ಓಂಪ್ರಕಾಶ ದಡ್ಡೆ, ಡಾ| ರಾಮಚಂದ್ರ ಗಣಾಪೂರ, ರಾಮಕೃಷ್ಣ ಸಾಳೆ, ಅಶೋಕ
ಕೋರೆ, ನಾಗಶೆಟ್ಟಿ ಪಾಟೀಲ ಗಾದಗಿ, ಹಾವಗಿರಾವ್‌ ವಟಗೆ, ಈಶ್ವರ ತಡೋಳಾ, ವಿಷ್ಣುಕಾಂತ ಬಲ್ಲೂರ, ಡಾ| ವಜ್ರಾ ಪಾಟೀಲ, ನಿರ್ಮಲಾ ಉದಗಿರೆ, ಶಶಿಕಲಾ, ಪಾರ್ವತಿ ಸೋನಾರೆ ಮೊದಲಾದವರು ಇದ್ದರು. ಶಾಮರಾವ್‌ ನೆಲವಾಡೆ ಸ್ವಾಗತಿಸಿದರು. ಡಾ| ರಘುಶಂಖ ಭಾತಂಬ್ರಾ ನಿರೂಪಿಸಿದರು ಗಣಪತಿ ವಂದಿಸಿದರು.

ಬರಹ ವ್ಯಕ್ತಿಕೇಂದ್ರಿತವಾದಾಗ ಸಮಾಜದಿಂದ ವಿಮುಖವಾಗುತ್ತದೆ. ಜೀವಪರ ಸಂವೇದನೆಗಳಿಗೆ ತುಡಿಯುತ್ತ, ಮಾನವೀಯ ಕಳಕಳಿಗೆ ಅಣಿಗೊಳಿಸುವ ಸಾಹಿತ್ಯ ಬಹುಕಾಲ ನೆಲೆ ನಿಲ್ಲುತ್ತದೆ.
 ಭೀಮಶೇನ ಗಾಯಕವಾಡ

Advertisement

Udayavani is now on Telegram. Click here to join our channel and stay updated with the latest news.

Next