ನವದೆಹಲಿ: ದೇಶಭಕ್ತಿ ಗೀತೆ, ಸಾರೇ ಜಹಾಂಸೇ ಅಚ್ಚಾ, ಹಿಂದುಸ್ತಾನ್ ಹಮಾರಾ ಎನ್ನುವ ಗೀತೆಯನ್ನು ಬರೆದ ಕವಿ ಅಲ್ಲಾಮ ಮೊಹಮದ್ ಇಕ್ಬಾಲ್ ಅವರ ಅಧ್ಯಾಯಯವನ್ನು ದೆಹಲಿ ವಿಶ್ವ ವಿದ್ಯಾಲಯದ ಪಠ್ಯಕ್ರಮದಿಂದ ತೆಗೆದು ಹಾಕುವ ನಿರ್ಧಾರ ಮಾಡಲಾಗಿದೆ. ದೆಹಲಿ ವಿವಿಯ ಅಕಾಡೆಮಿಕ್ ಕೌನ್ಸಿಲ್ ಶುಕ್ರವಾರ ಈ ಬಗ್ಗೆ ನಿರ್ಣಯವನ್ನು ಅಂಗೀಕಾರ ಮಾಡಿದೆ.
1877ರಲ್ಲಿ ಪಾಕಿಸ್ತಾನದ ಸಿಯಾಲ್ಕೋಟ್‌ನಲ್ಲಿ ಜನಿಸಿದ್ದ ಕವಿ ಅಲ್ಲಾಮ ಮೊಹಮದ್ ಇಕ್ಬಾಲ್, ಪಾಕಿಸ್ತಾನದ ರಾಷ್ಟ್ರಕವಿ ಮಾತ್ರವಲ್ಲ ಪಾಕಿಸ್ತಾನ ಎನ್ನುವ ಹೊಸ ದೇಶದ ಕಲ್ಪನೆಯನ್ನು ಮೊದಲಿಗೆ ಹುಟ್ಟುಹಾಕುವ ಮೂಲಕ ಹೆಸರುವಾಸಿಯಾಗಿದ್ದಾರೆ.
ಇವರ ‘ಮಾಡರ್ನ್ ಇಂಡಿಯನ್ ಪೊಲಿಟಿಕಲ್ ಥಾಟ್’ ಶೀರ್ಷಿಕೆಯ ಅಧ್ಯಾಯವು ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಆರನೇ ಸೆಮಿಸ್ಟರ್ ನ ಪಠ್ಯದ ಭಾಗವಾಗಿದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯದ 1014ನೇ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಪದವಿಪೂರ್ವ ಕೋರ್ಸ್ ಗಳ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಭಾರತವನ್ನು ಒಡೆಯಲು ಅಡಿಪಾಯ ಹಾಕಿದವರು ಪಠ್ಯಕ್ರಮದಲ್ಲಿ ಇರಬಾರದು ಎಂದು ಉಪಕುಲಪತಿ ಪ್ರೊಫೆಸರ್ ಯೋಗೇಶ್ ಸಿಂಗ್ ಹೇಳಿದ್ದಾರೆ.
ಉಪಕುಲಪತಿಗಳ ಪ್ರಸ್ತಾವನೆಯನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿತು. ಸಭೆಯಲ್ಲಿ, ಪದವಿಪೂರ್ವ ಪಠ್ಯಕ್ರಮ ಚೌಕಟ್ಟು (ಯುಜಿಸಿಎಫ್) 2022 ರ ಅಡಿಯಲ್ಲಿ ವಿವಿಧ ಕೋರ್ಸ್‌ಗಳ ನಾಲ್ಕು, ಐದನೇ ಮತ್ತು ಆರನೇ ಸೆಮಿಸ್ಟರ್‌ಗಳ ಪಠ್ಯಕ್ರಮದ ನಿರ್ಣಯವನ್ನು ಅಂಗೀಕರಿಸಲಾಯಿತು.
ರಾಜ್ಯಶಾಸ್ತ್ರದ ಪಠ್ಯಕ್ರಮದಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ತರಲಾಯಿತು. ಅದರ ಪ್ರಕಾರ, ಇಕ್ಬಾಲ್ ಅವರ ಅಧ್ಯಾಯವನ್ನು ಪಠ್ಯಕ್ರಮದಿಂದ ತೆಗೆದುಹಾಕುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಅಕಾಡೆಮಿಕ್ ಕೌನ್ಸಿಲ್ ಸದಸ್ಯರೊಬ್ಬರು ಹೇಳಿದರು.
ಇದನ್ನೂ ಓದಿ: ದುರ್ಘಟನೆ; 24 ಗಂಟೆಯೊಳಗೆ ವರದಿ, 48 ಗಂಟೆಯೊಳಗೆ ಪರಿಹಾರ: ಎಸಿ