ಸ್ವರ್ಣ ವರ್ಣದಿ ನಾಮದುಲ್ಲೇಖವೊಲ್ಲೆ |
ತಾಯ್ನಾಡ ನೆಲದಲ್ಲಿ, ಹಿಡಿಮಣ್ಣ ಹುಡಿಯಲ್ಲಿ
ಬೆರೆವ ಭಾಗ್ಯವೆ ಸಾಕು ಸಾಯುಜ್ಯವಲ್ಲೆ |
Advertisement
ಎಂಬ ಹಾಡನ್ನು 1949ನೇ ಇಸವಿಯಲ್ಲಿ ಕವನಿಸಿ ತಾಯ್ನಾಡಿನ ಪ್ರೇಮವನ್ನು ಮೆರೆದವರು ಖ್ಯಾತ ಕವಿ ಕಯ್ನಾರ ಕಿಞ್ಞಣ್ಣ ರೈ.
ಸಾವನ್ನು ಅತಿಥಿಯಾಗಿ ಪರಿಭಾವಿಸಿ
ನಾ ಬಯಸದಿದ್ದರೂ ನೀನು ಬಂದೇ ಬರುವೆ |
ಅದಕಾಗಿ ಬಾರೆಂದು ಕರೆಯದಿರುವೆ;
ಎಂದಾದರೊಮ್ಮೆ ಬಂದೇ ಬರುವೆ ನಂಬಿರುವೆ.
ಇಂದೇ ಬಂದರೂ ಬಿಡದೇ ಸ್ವಾ-ಗತಿಸುವೆ! ಇಲ್ಲಿ ಸ್ವಾ-ಗತಿಸುವೆ ಎನ್ನುವ ಶಬ್ದವನ್ನು ಅವರು ದ್ವಯಾರ್ಥದಲ್ಲಿ ಪ್ರಯೋಗಿಸಿ ಸಾವನ್ನು ಸ್ವಾಗತಿಸುವ ಪಾರಮಾರ್ಥಿಕತೆಯನ್ನು ತೋರಿಸಿದ್ದಾರೆ.
ಅವರು ಬದುಕನ್ನೂ ಬಹಳವಾಗಿ ಪ್ರೀತಿಸಿದವರು.
Related Articles
ಮೊದಲಿನ ಮಹಾಯುದ್ಧ ಮಸಗುವಂದು |
ಕ್ರಿಸ್ತಾಬ್ದ ಸಾಹಸ್ರದೊಂಬತ್ತು ನೂರ ಹದಿ |
ನೈದನೆಯ ವರ್ಷದಲ್ಲಿ ಜೂನೆಂಟರಂದು |
Advertisement
ಹೀಗೆ ಜೀವಿತ ಕಾಲದಲ್ಲಿ ತಮ್ಮ ಹುಟ್ಟು ಸಾವುಗಳೆರಡನ್ನೂ ಕವನಿಸಿದ ಅಪೂರ್ವ ಕವಿ ಕಯ್ನಾರರು.
ಪಶೆÏೕಮ ಶರದಃಶ್ಶತಂ, ಜೀವೇಮ ಶರದಃಶ್ಶತಂ, ಮೋದಾಮ ಶರದಃಶ್ಶತಂ, ಶತಂ ಜೀವ ಶರದೋ ವರ್ಧಮಾನ ಎಂಬ ಆರ್ಷೇಯ ವಾಕ್ಯವನ್ನು ಸದಾ ಅನುರಣಿಸುತ್ತಿದ್ದ ಅವರು ಶತಮಾನದ ಬದುಕನ್ನು ಹಾರೈಸಿ, ಶತಪೂರ್ತಿ ಸಂಭ್ರಮವನ್ನು ಆಚರಿಸಿ ನೂರು ವರ್ಷ 2 ತಿಂಗಳು 1 ದಿನದ ಆರೋಗ್ಯ ಪೂರ್ಣ ಜೀವನ ನಡೆಸಿ 2015ರ ಆಗಸ್ಟ್ 9ರಂದು ನಿಧನ ಹೊಂದಿದರು.
ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನಿಸಿದ ಕಿಞ್ಞಣ್ಣ ರೈಯವರು ಸಂಸ್ಕೃತ, ಕನ್ನಡ ವಿದ್ವಾನ್ ಪರೀಕ್ಷೆಗಳಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿ ಪಡೆದು, ಶ್ರೇಷ್ಠ ಕವಿಯಾಗಿ, ಉತ್ತಮ ವಾಗ್ಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕರಾಗಿ ಕರ್ನಾಟಕ ಏಕೀಕರಣದ ಮುಂದಾಳುವಾಗಿ, ಪ್ರಗತಿಪರ ಕೃಷಿಕರಾಗಿ, ಗ್ರಾಮೋದ್ಧಾರದ ಅಧ್ವರ್ಯುವಾಗಿ, ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ವಿಶ್ವವಿದ್ಯಾನಿಲಯಗಳ ಡಾಕ್ಟರೇಟ್, ನಾಡೋಜ, ಸರಕಾರದ ಪಂಪ ಪ್ರಶಸ್ತಿಗಳಿಗೆ ಭಾಜನರಾಗಿ ಕನ್ನಡ ಸಾಹಿತ್ಯ ಲೋಕದ ಹಿರಿಯಣ್ಣನಾಗಿ ಬೆಳೆದ ಕರಾವಳಿಯ ಆಧುನಿಕ ಮಹಾಕವಿ ಎಂದು ಕರೆಸಿಕೊಂಡವರು.
’37 ಕೃತಿ ರಚಿಸಿ ಸಾಹಿತ್ಯ ಲೋಕದ ದಿಗ್ಗಜರಾದ ಕಯ್ನಾರರು ತಮ್ಮ ಮೇರು ಸಾಧನೆಗಳ ಹೊರತಾಗಿಯೂ ಅತ್ಯಂತ ವಿನೀತ ಭಾವದಿಂದ ಪುನೀತರಾದವರು. ಕನ್ನಡದ ಈ ಹಿರಿಯ ಪಂಕ್ತಿಯಲ್ಲಿ ನಾನು ಅತ್ಯಂತ ಕಿರಿಯನು. ಹೆಬ್ಬೆರಳು, ತೋರು ಬೆರಳು, ನಡುಬೆರಳುಗಳ ಸಾಲಿನಲ್ಲಿ ಕೇವಲ ಕಿರು ಬೆರಳಿನಂತಿರುವವನು. ಬದುಕಿನುದ್ದಕ್ಕೂ ನಾಡು-ನುಡಿಗಳ ಪ್ರೇಮದ ಪುಣ್ಯಭಾರವನ್ನು – ಹರಕೆಯ ಹೊರೆಯನ್ನು ಹೊತ್ತುಕೊಂಡು ನಡೆಯುತ್ತಾ ಬಂದಿದ್ದೇನೆ. ಮುಂದೆ ಒಂದು ಸುದಿನ ಸೂರ್ಯೋದಯದಲ್ಲಿ ಕನ್ನಡ ತಾಯಿಯ ಅಡಿಗಳಿಗೆ ಮುಡಿಮುಟ್ಟಿಸಿ ಹರಕೆಯ ಹೊರೆ ಅರ್ಪಿಸಿ, ನನ್ನ ಪಾಲಿನ ಋಣದ ಭಾರವನ್ನು ಕೈಲಾದಷ್ಟು ಇಳಿಸಿ ಜೀವನದಲ್ಲಿ ಸಾರ್ಥಕ್ಯ ಪಡೆಯಲು ಹಾರೈಸಿದ್ದೇನೆ. ಅದಕ್ಕಿಂತ ಹೆಚ್ಚಿನ ಭಾಗ್ಯ ಬೇರೇನಿದೆ?’ ಎಂತಹ ನಿಸ್ಪೃಹ ಭಾವ. ಬಹುಶಃ ಈ ನಿಸ್ಪೃಹತೆಯಿಂದಲೇ ಅವರ ಸಾಧನೆಗಳಿಗೆ ಸಮನಾದ ಗೌರವ ಪ್ರಶಸ್ತಿಗಳು ಪ್ರಾಪ್ತಿಯಾಗಲಿಲ್ಲ.
ಸುಮಾರು 36 ವರ್ಷಗಳ ಅಂತರವಿದ್ದರೂ ಪೈ ಮತ್ತು ರೈಯವರಿಗೆ ಪರಸ್ಪರ ಗೌರವ ಭಾವವಿತ್ತು. ಇವರೀರ್ವರ ಸಾಧನೆಗಳನ್ನು ಗಮನಿಸಿ ಡಾ| ಹಾ.ಮಾ. ನಾಯಕರು ಕಾಸರಗೋಡಿಗೆ ಒಬ್ಬ ಪೈ, ಒಬ್ಬ ರೈ ಎಂದು ಉದ್ಗರಿಸಿದುದು ಇದೀಗ ಇತಿಹಾಸ.
ಕಯ್ನಾರರ ಅಭಿಮಾನಿಗಳು, ವಿದ್ಯಾರ್ಥಿಗಳು, ಉಪಕೃತರು, ಸಾಹಿತ್ಯ ಪ್ರಿಯರು ಕಯ್ನಾರರ ಸ್ಮರಣೆಯನ್ನು ನಿರಂತರ ಉಳಿಸಿಕೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅವರ ಬದುಕು ಬರಹದ ಬಗ್ಗೆ 12 ವಿಚಾರ ಸಂಕಿರಣಗಳು ಜರಗಿವೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕಯ್ನಾರ ನೆಂಪು ಕಾರ್ಯಕ್ರಮ ನಡೆಸಿದೆ. ಬದಿಯಡ್ಕದ ನವಜೀವನ ಹೈಸ್ಕೂಲು, ಧರ್ಮತಡ್ಕದ ಶಾಲೆಯಲ್ಲಿ ಅವರ ಸ್ಮರಣೆ ನಡೆಯುತ್ತಿದೆ.
ಡಾ| ಮೋಹನ ಆಳ್ವರು 5 ಮಹಡಿಗಳ ಬೃಹತ್ ಕಟ್ಟಡದಲ್ಲಿ ಕಯ್ನಾರ ಗ್ರಂಥಾಲಯ ಸ್ಥಾಪಿಸಿದ್ದಾರೆ. ಕಯ್ನಾರರ ಮನೆ ಕವಿತಾ ಕುಟೀರದ ಬಳಿಯಲ್ಲಿ ಕುಟುಂಬಿಕರು ದಾನ ನೀಡಿದ 30 ಸೆಂಟ್ಸ್ ಜಾಗದಲ್ಲಿ ಕೇರಳ ಮತ್ತು ಕರ್ನಾಟಕ ಸರಕಾರಗಳ ಸಹಯೋಗದಲ್ಲಿ 4 ಕೋಟಿ ರೂ. ವೆಚ್ಚದ ಕಯ್ನಾರ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಚಾಲನೆ ದೊರೆತಿದೆ.
ಕಯ್ನಾರರ ಬದುಕು, ಬರಹಗಳ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ, ಮೂವರು ಡಾಕ್ಟರೇಟ್ ಮತ್ತು ಓರ್ವರು ಎಂ.ಫಿಲ್ ಪದವಿ ಪಡೆದಿದ್ದಾರೆ.
ಕಯ್ನಾರರ ಕುರಿತು ವಿವಿಧ ಲೇಖಕರು 15 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈ ಎಲ್ಲ ಕಾರ್ಯಗಳಿಂದ ಕಯ್ನಾರರು ಸಾಹಿತ್ಯ ಲೋಕದಲ್ಲಿ ಅಮರರಾಗಿದ್ದಾರೆ.
ಭುವನ ಪ್ರಸಾದ ಹೆಗ್ಡೆ