ಬೆಂಗಳೂರು: ಅತ್ಯಾಚಾರ, ಲೈಂಗಿಕ ಶೋಷಣೆಗೆ ತುತ್ತಾಗುವ ಸಂತ್ರಸ್ತ ಮಕ್ಕಳ ರಕ್ಷಣೆ ದೃಷ್ಟಿಯಿಂದ ಹಲವು ನಿರ್ದೇಶನಗಳನ್ನು ನೀಡಿರುವ ಹೈಕೋರ್ಟ್, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012 (ಪೋಕ್ಸೋ) ಪ್ರಕರಣಗಳಲ್ಲಿ ಆರೋಪಿಗಳು ಸಲ್ಲಿಸುವ ಜಾಮೀನು ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸುವ ಮೊದಲು ಕಡ್ಡಾಯವಾಗಿ ಸಂತ್ರಸ್ತರ ಕುಟುಂಬಕ್ಕೆ ನೋಟಿಸ್ ಜಾರಿಗೊಳಿಸಬೇಕು ಎಂದು ಆದೇಶ ನೀಡಿದೆ.
ಲೈಂಗಿಕ ದೌರ್ಜನ್ಯದಿಂದ ಸಂತ್ರಸ್ತ ಪೋಷಕರಾದ ಬೆಂಗಳೂರಿನ ಬಿಬಿ ಆಯೇಷಾ ಖಾನಂ, ದಿವ್ಯಾ ಕ್ರಿಸ್ಟೈನ್ ಹಾಗೂ ಪೆಂಚಿಲಮ್ಮ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ (ಪೋಕ್ಸೋ) ಅತ್ಯಂತ ಹೀನ ಮತ್ತು ಗಂಭೀರ ಸ್ವರೂಪದ ಅಪರಾಧವಾಗಿದೆ. ಕ್ಷುಲ್ಲಕ ವ್ಯಕ್ತಿಗಳು ಮಾತ್ರ ಇಂತಹ ಅಪರಾಧ ಮಾಡುತ್ತಾರೆ. ಸಂವಿಧಾನದ ಕಲಂ 21ರ ಪ್ರಕಾರ ಆರೋಪಿಗೆ ಮಾತ್ರವಲ್ಲ ಸಂತ್ರಸ್ತರು ಮತ್ತು ಅವರ ಕುಟುಂಬಕ್ಕೂ ಜೀವಿಸುವ ಹಕ್ಕಿದೆ. ಸಮಾಜದಲ್ಲಿ ಘಟಿಸುವ ಇಂತಹ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳಲ್ಲಿ ಸಂತ್ರಸ್ತರು ಮತ್ತು ಅವರ ಕುಟಂಬದವರ ಮಾತಿಗೆ ಮಾನ್ಯತೆೆ ನೀಡಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಆದ್ದರಿಂದ, ಇಂತಹ ಪ್ರಕರಣಗಳಲ್ಲಿ ಆರೋಪ ಸಾಬೀತುಪಡಿಸುವುದು ಸರಕಾರದ ಹೊಣೆ ಗಾರಿಕೆಯಾಗಿದೆ. ಆದರೆ ಅಭಿಯೋಜನ ವ್ಯವಸ್ಥೆ ಕಾರ್ಯದೊತ್ತಡಕ್ಕೆ ಸಿಲುಕಿದೆ. ಹೀಗಾಗಿ, ಹಲವು ಬಾರಿ ಅಭಿಯೋಜಕರ ನೇಮಕ ವಿಳಂಬವಾಗಲಿದೆ.
ಸಂತ್ರಸ್ತೆ ಅಥವಾ ದೂರುದಾರರು ಅಭಿಯೋಜಕರಿಗೆ ಸಹಾಯ ನೀಡಬೇಕಾಗುತ್ತದೆ. ಸಂತ್ರಸ್ತ ರಿಗೆ ಆರೋಪಿಗಳ ಜಾಮೀನು ಅರ್ಜಿಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ, ಹಾಗಾಗಿ ವಿಶೇಷ ನ್ಯಾಯಾಲಯಗಳು ಇಂತಹ ಪ್ರಕರಣ ಗಳಲ್ಲಿ ಸಂತ್ರಸ್ತರು ಕುಟುಂಬ ದವರು ಅಥವಾ ಪೋಷಕರು ಅಥವಾ ವಕೀಲರಿಗೆ ಮಾಹಿತಿಯನ್ನು ನೀಡುವುದು ಕಡ್ಡಾಯ ಎಂದು ನ್ಯಾಯಪೀಠ ಹೇಳಿದೆ.
ಪೊಲೀಸ್ ಠಾಣೆಗೂ ಕಳುಹಿಸಿ
ಈ ಆದೇಶದ ಪ್ರತಿಯನ್ನು ಎಲ್ಲ ನ್ಯಾಯಾಲ ಯಗಳಿಗೆ ತಲುಪಿಸುವಂತೆ ಮತ್ತು ನ್ಯಾಯಾಂಗ ಅಕಾಡೆಮಿಗೆ ಕಳುಹಿಸಿ ಅಲ್ಲಿ ತರಬೇತಿಯಲ್ಲಿ ಸೇರಿಸಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ. ಜತೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಆದೇಶದ ಪ್ರತಿಯನ್ನು ಕಳುಹಿಸಬೇಕು. ಅವರು ಎಲ್ಲ ಪೊಲೀಸ್ ಠಾಣೆಗಳಿಗೂ ಆ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.