ಬೆಂಗಳೂರು: ಮದುವೆಯಾಗುವು ದಾಗಿ ನಂಬಿಸಿ ವಾಲಿಬಾಲ್ ಆಟಗಾರ್ತಿ ಜತೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ, ಇದೀಗ ಮದುವೆಯಾಗದೆ ವಂಚಿಸಿದ ಆರೋಪದಡಿ ರಾಷ್ಟ್ರೀಯ ಹಾಕಿ ಆಟಗಾರನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತೆಲಂಗಾಣ ಮೂಲದ 22 ವರ್ಷದ ವಾಲಿಬಾಲ್ ಅಟಗಾರ್ತಿ ನೀಡಿದ ದೂರಿನ ಮೇರೆಗೆ ಹಾಕಿ ಆಟಗಾರ ವರುಣ್ ಕುಮಾರ್(28) ವಿರುದ್ಧ ಜ್ಞಾನಭಾರತಿ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಸಲಾಗಿದೆ.
ದೂರಿನಲ್ಲಿ ಏನಿದೆ?: 2016-17ನೇ ಸಾಲಿನಲ್ಲಿ ಸಂತ್ರಸ್ತೆ ನ್ಯಾಷನಲ್ ಸೆಂಟರ್ ಆಫ್ ಎಕ್ಸ್‌ಲೆನ್ಸಿ ಅಡಿಯಲ್ಲಿ ವಾಲಿಬಾಲ್ ತರಬೇತಿ ಪಡೆಯಲು ಆಯ್ಕೆಯಾಗಿದ್ದು, ಜ್ಞಾನಭಾರತಿಯಲ್ಲಿರುವ ಸಾಯಿ ಸ್ಪೋರ್ಟ್ಸ್ ಆಥಾರಿಟಿ ಆಫ್ ಇಂಡಿಯಾ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿಗೆ ಬಂದಿದ್ದು, ಈ ಕೇಂದ್ರದಲ್ಲಿರುವ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು. ಆಗ ಸಂತ್ರಸ್ತೆಯ ವಯಸ್ಸು 16. “2018ನೇ ಸಾಲಿನಲ್ಲಿ ಇದೇ ಕೇಂದ್ರ ದಲ್ಲಿ ನಡೆದ ರಾಷ್ಟ್ರೀಯ ಹಾಕಿ ಆಟಗಾರರ ತರಬೇತಿ ಶಿಬಿರದಲ್ಲಿ ಹಾಕಿ ಆಟಗಾರ ವರುಣ್ ಕುಮಾರ್ ಕೂಡ ತರಬೇತಿ ಪಡೆಯುತ್ತಿದ್ದ. ಆಗ ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ ವರುಣ್ ಕುಮಾರ್ ಪರಿಚಯವಾಗಿದ್ದು, ತನಗೆ ಸಂದೇಶ ಕಳುಹಿಸುತ್ತಿದ್ದ. ನಾನು ಅಪ್ರಾಪ್ತೆಯಾಗಿದ್ದರಿಂದ ಪ್ರತಿಕ್ರಿಯೆ ನೀಡಿಲ್ಲ. ಆದರೆ, ವರುಣ್‌ಗೆ, ಸಂತ್ರಸ್ತೆ ಇದೇ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ವಿಚಾರ ತಿಳಿದು, ತನ್ನ ಸ್ನೇಹಿತರನ್ನು ಸಂತ್ರಸ್ತೆ ಬಳಿ ಕಳುಹಿಸಿದ್ದ. ಅವರು ನಮ್ಮನ್ನು ನಿಮ್ಮ ಸಹೋದರರಂತೆ ಭಾವಿಸುವಂತೆ’ ಹೇಳಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಬಳಿಕ ವರುಣ್‌ನನ್ನು ಭೇಟಿಯಾಗಿದ್ದೆ. ಈ ವೇಳೆ ವರುಣ್, “ನಿನ್ನನ್ನು ಮದುವೆಯಾಗುತ್ತೇನೆ. ನಿಮ್ಮ ಮನೆಯವರನ್ನು ನಾನೇ ಒಪ್ಪಿಸುತ್ತೇನೆ. ಅಲ್ಲಿಯವರೆಗೆ ಇಬ್ಬರೂ ಪ್ರೇಮಿಗಳಾಗಿ ಇರೋಣ’ ಎಂದು ಹೇಳಿದ್ದ. ಅದಕ್ಕೆ ನಾನು ಒಪ್ಪಿ ಕೊಂಡೆ. ಈ ಮಧ್ಯೆ 2019ರ ಜುಲೈನಲ್ಲಿ ಒಂದು ದಿನ ವರುಣ್, ರಾತ್ರಿ ಊಟಕ್ಕೆ ಆಹ್ವಾನಿಸಿದ್ದ. ಆಗ ಜಯನಗರದ 4ನೇ ಬ್ಲಾಕ್‌ನಲ್ಲಿರುವ ಹೋಟೆಲ್‌ನಲ್ಲಿ ಇಬ್ಬರು ಊಟ ಮಾಡಿದ್ದೇವು’. “ಊಟದ ನಂತರ ನಾನು ಹಾಸ್ಟೆಲ್‌ಗೆ ಹೋಗಲು ಮುಂದಾಗಿದ್ದೆ. ಆಗ ವರುಣ್, ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದೇನೆ. ತರಬೇತಿ ಶಿಬಿರದಲ್ಲಿ ಸಮಯ ಸಿಗುವುದಿಲ್ಲ. ಹೀಗಾಗಿ ರೂಮ್‌ನಲ್ಲಿ ಕೆಲ ಸಮಯ ಮಾತನಾಡಿಕೊಂಡು ಹೋಗೋಣ’ ಎಂದಿದ್ದ. ಅದಕ್ಕೆ ನಾನು ಒಪ್ಪಿಕೊಂಡೆ. ಈ ವೇಳೆ ನನ್ನೊಂದಿಗೆ ದೈಹಿಕ ಸಂರ್ಪಕ ನಡೆಸಿ, ವಿವಾಹವಾಗುವುದಾಗಿ ನಂಬಿಸಿ ವಂಚಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.
5 ವರ್ಷದಿಂದ ಹಲವು ಬಾರಿ ದೈಹಿಕ ಸಂಪರ್ಕ : “ಮದುವೆಯಾಗುತ್ತೇನೆ’ ಎಂದು ನಂಬಿಸಿ ನನ್ನೊಂದಿಗೆ ವರುಣ್ ದೈಹಿಕ ಸಂಪರ್ಕ ನಡೆಸಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಹೀಗೆ ಐದು ವರ್ಷಗಳ ಕಾಲ ಮದುವೆಯ ಭರವಸೆ ನೀಡಿ ವರುಣ್, ನಗರದ ವಿವಿಧ ಹೋಟೆಲ್‌ಗಳಿಗೆ ಕರೆದೊಯ್ದು ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದೀಗ ನಾನು ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದಾಗ, ಕೆಲ ದಿನಗಳ ಕಾಲ ಚೆನ್ನಾಗಿ ಮಾತನಾಡಿಕೊಂಡು ಇದ್ದ. ಈ ವೇಳೆ ಮದುವೆಯಾಗುವಂತೆ ಕೇಳಿದಾಗ, ನಾವಿಬ್ಬರು ಮದುವೆಯಾಗುವುದು ಬೇಡ. ಹೀಗೆ ಇದ್ದು ಬಿಡೋಣ’ ಎಂದು ಸಮಾಜಾಯಿಸಿ ನೀಡುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಫೋಟೋ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ : ಮತ್ತೂಂದೆಡೆ ಇದೇ ರೀತಿ ಮದುವೆಯಾಗುವಂತೆ ತೊಂದರೆ ಕೊಟ್ಟರೆ, ನನ್ನ ಬಳಿ ಇರುವ ನಿನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ’ ವರುಣ್ ಬೆದರಿಕೆ ಹಾಕಿದ್ದಾನೆ. ಅಪ್ರಾಪ್ತ ವಯಸ್ಸಿನಲ್ಲಿ ನನ್ನನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ, ಈಗ ಮದುವೆಯಾಗದೆ ಮೋಸ ಮಾಡಿರುವ ವರುಣ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರಿನಲ್ಲಿ ಕೋರಿದ್ದಾರೆ. ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.