ಹೊಸದಿಲ್ಲಿ : ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 13,500 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ, ಆತನ ಸಹೋದರ ನಿಶಾಲ್ ಮೋದಿ ಮತ್ತು ಇವರ ನೌಕರ ಸುಭಾಷ್ ಪರಬ್ ವಿರುದ್ಧ ಇಂಟರ್ ಪೋಲ್, ಸಿಬಿಐ ಕೋರಿಕೆ ಪ್ರಕಾರ, ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಕಳೆದ ಜೂನ್ 29ರ ಶುಕ್ರವಾರದಂದು ಇಂಟರ್ ಪೋಲ್ ಈ ಮೂವರಿಗೆ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಿದ್ದು ಅದನ್ನು ಇಂದು ಸೋಮವಾರ ಅಂತಾರಾಷ್ಟ್ರೀಯ ಪೊಲೀಸ್ ಸಹಕಾರ ಸಂಸ್ಥೆ ಬಹಿರಂಗಪಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಂಟರ್ ಪೋಲ್ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಿರುವ ಕಾರಣ ನೀರವ್ ಮೋದಿ ಮತ್ತು ಆತನ ಸಂಗಡಿಗರಿಗೆ ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಪ್ರಯಾಣಿಸುವುದು ಅಸಾಧ್ಯವಾಗಲಿದ್ದು ಇದರ ಪರಿಣಾವಾಗಿ ಅವರ ಬಂಧನ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂಬಯಿಯ ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಚಾರ್ಜ್ ಶೀಟ್ ದಾಖಲಿಸಿರುವುದನ್ನು ಅನುಸರಿಸಿ ಇಂಟರ್‌ಪೋಲ್‌ಗೆ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡುವುದು ಕಾನೂನು ಪ್ರಕಾರ ಸಾಧ್ಯವಾಗಿದೆ.
ಇದರಿಂದಾಗಿ ಇಂಟರ್ ಪೋಲ್ ತನ್ನ 192 ಸದಸ್ಯ ರಾಷ್ಟ್ರಗಳಿಗೆ ಆರೋಪಿಗಳು ತಮ್ಮ ದೇಶದಲ್ಲಿ ತಲೆಮರೆಸಿಕೊಂಡಿದ್ದಲ್ಲಿ ಅವರನ್ನು ಪತ್ತೆ ಹಚ್ಚಿ, ಗುರುತಿಸಿ ಬಂಧಿಸುವಂತೆ ಸೂಚಿಸಲಿದೆ. ಅನಂತರದಲ್ಲಿ ಆ ದೇಶದಿಂದ ಆರೋಪಿಗಳನ್ನು ಭಾರತಕ್ಕೆ ಗಡೀಪಾರು ಮಾಡುವ ಕಾನೂನು ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.