ವಾಷಿಂಗ್ಟನ್ : ಪಂಜಾಬ್ ನ್ಯಾಶನಲ್ ಬ್ಯಾಂಕ್ ಬಹುಕೋಟಿ ವಂಚನೆ ಹಗರಣದ ಪ್ರಧಾನ ಆರೋಪಿಯಾಗಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಅಮೆರಿಕದಲ್ಲಿ ಇದ್ದಾರೆಂಬುದನ್ನು ದೃಢಪಡಿಸಲಾಗದು ಎಂದು ಅಮೆರಿಕದ ವಿದೇಶಾಂಗ ಅಧಿಕಾರಿ ಹೇಳಿದ್ದಾರೆ.
“ನೀರವ್ ಮೋದಿ ಅವರು ಅಮೆರಿಕದಲ್ಲಿ ಇದ್ದಾರೆ ಎಂಬ ಮಾಧ್ಯಮ ವರದಿಗಳನ್ನು ನಾವು ಗಮನಿಸಿದ್ದೇವೆ; ಆದರೆ ಆತ ಅಮೆರಿಕದಲ್ಲಿ ಇರುವುದನ್ನು ನಾವು ದೃಢಪಡಿಸಲಾರೆವು’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅಮೆರಿಕ ವಿದೇಶಾಂಗ ಅಧಿಕಾರಿ ಉತ್ತರಿಸಿದರು.
ನೀರವ್ ಮೋದಿ ಅಮೆರಿಕದಲ್ಲಿರುವುದನ್ನು ಪತ್ತೆ ಹಚ್ಚಲು ನೀವು ಭಾರತ ಸರಕಾರಕ್ಕೆ ನೆರವಾಗುವಿರಾ ಎಂಬ ಪ್ರಶ್ನೆಗೆ, “ನೀರವ್ ಮೋದಿ ಕುರಿತ ತನಿಖೆ ಸಂಬಂಧ ಭಾರತೀಯ ಅಧಿಕಾರಿಗಳಿಗೆ ನೆರವಾಗುವ ಪ್ರಶ್ನೆಯನ್ನು ನ್ಯಾಯಾಂಗ ಇಲಾಖೆಗೆ ಉಲ್ಲೇಖೀಸಲಾಗುವುದು’ ಎಂದವರು ಹೇಳಿದರು.
ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅಮೆರಿಕದ ನ್ಯಾಯಾಂಗ ಇಲಾಖೆ ನಿರಾಕರಿಸಿದೆ.
12,000 ಕೋಟಿ ರೂ.ಗಳ ಪಿಎನ್‌ಬಿ ವಂಚನೆ ಹಗರಣದಲ್ಲಿ ಭಾರತೀಯ ತನಿಖಾಧಿಕಾರಿಗಳು ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ ಮತ್ತು ಇತರರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ವಿದೇಶಕ್ಕೆ ಪಲಾಯನ ಮಾಡಿರುವ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಎಫ್ಐಆರ್ ದಾಖಲಿಸಿಕೊಂಡು ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಬಿರುಸಿನ ತನಿಖೆ ನಡೆಸುತ್ತಿದೆ.