ನವದೆಹಲಿ: 2023ರಲ್ಲಿ ನಡೆಯಲಿರುವ ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಸಲಹೆಗಳನ್ನು ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ಸರ್ವ ಪಕ್ಷ ಸಭೆ ನಡೆದಿದ್ದು, ಬಳಿಕ ಪ್ರಧಾನಿ ಮೋದಿ ಅವರು ವಿಪಕ್ಷ ನಾಯಕರ ಜತೆ ಕುಶಲೋಪರಿಯಲ್ಲಿ ತೊಡಗಿದ್ದು ಮಾಧ್ಯಮಗಳ ಗಮನ ಸೆಳೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:“ನನ್ನನ್ನು ಯಾರೂ ಬಂಧಿಸಿಲ್ಲ.. ಸಿಧು ಮೂಸೆವಾಲ ಪ್ರಕರಣದ ಮಾಸ್ಟರ್ ಮೈಂಡ್ ಗೋಲ್ಡಿ ಬ್ರಾರ್
ಜಿ20 ಅಧ್ಯಕ್ಷತೆಯು ಇಡೀ ದೇಶಕ್ಕೆ ಸೇರಿದ್ದು, ನಮ್ಮ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಇರುವಂಥ ವಿಶಿಷ್ಟ ಅವಕಾಶ, ಅದನ್ನು ನಾವೆಲ್ಲರೂ ಸೇರಿ ಯಶಸ್ವಿಯಾಗಿಸೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು.
ಸಭೆಯ ಬಳಿಕ ಚಹಾಕೂಟದಲ್ಲಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ, ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ, ಬಿಜೆಡಿಯ ನವೀನ್ ಪಟ್ನಾಯಕ್, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ವೈಎಸ್ ಆರ್ ಕಾಂಗ್ರೆಸ್ ನ ಜಗನ್ ಮೋಹನ್ ರೆಡ್ಡಿ, ಸಿಪಿಎಂನ ಸೀತಾರಮ ಯೆಚೂರಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಟಿಡಿಪಿಯ ಚಂದ್ರಬಾಬು ನಾಯ್ದು, ಡಿಎಂಕೆಯ ಎಂ.ಕೆ.ಸ್ಟಾಲಿನ್ ಜತೆ ಹರಟುತ್ತಾ, ಹಾಸ್ಯ ಚಟಾಕಿ ಹಾರಿಸುತ್ತ ಮಾತನಾಡುತ್ತಿರುವುದು ಗಮನ ಸೆಳೆದಿರುವುದಾಗಿ ವರದಿ ಹೇಳಿದೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದ ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನಿ ಮೋದಿ ಅವರಿಗೆ ರಾವಣನಂತೆ ನೂರು ತಲೆಗಳಿವೆಯೇ ಎಂದು ಹೇಳಿಕೆ ನೀಡುವ ಮೂಲಕ ತೀವ್ರ ಟೀಕೆಗೊಳಗಾಗಿದ್ದರು. ಅದೇ ರೀತಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಟಿಎಂಸಿಯ ಮಮತಾ ಬ್ಯಾನರ್ಜಿ, ಟಿಡಿಪಿಯ ನಾಯ್ದು, ಡಿಎಂಕೆಯ ಸ್ಟಾಲಿನ್ ಕೂಡಾ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು.