ಜಾರ್ಖಂಡ್/ಬೆಹ್ರೈಟ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಹಲವೆಡೆ ತೀವ್ರ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರುವ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ನೇರ ಸವಾಲು ಹಾಕಿದ್ದಾರೆ.
ಪ್ರತಿಯೊಬ್ಬ ಪಾಕಿಸ್ತಾನಿಯನ್ನು ಭಾರತೀಯ ಪ್ರಜೆಯನ್ನಾಗಿ ಮಾಡಬೇಕೆಂಬುದು ನಮ್ಮ ಇಚ್ಛೆ ಎಂದು ಕಾಂಗ್ರೆಸ್ ಘೋಷಿಸಲಿ ಎಂದು ಪ್ರಧಾನಿ ಮೋದಿ ಸವಾಲು ಹಾಕಿದರು. ಮುಸ್ಲಿಮರ ವಿರುದ್ಧ ವಿರೋಧ ಪಕ್ಷಗಳು ಭಯ ಹುಟ್ಟಿಸುತ್ತಿವೆ ಎಂದು ಆರೋಪಿಸಿದರು.
ನೂತನ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಯಾವೊಬ್ಬ ಪ್ರಜೆಗೂ ತೊಂದರೆಯಾಗುವುದಿಲ್ಲ ಎಂದು ಮತ್ತೊಮ್ಮೆ ಭರವಸೆ ನೀಡುವುದಾಗಿ ಪುನರುಚ್ಚರಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಅದರ ಮೈತ್ರಿ ಪಕ್ಷಗಳಿಗೆ ನಾನು ಬಹಿರಂಗ ಸವಾಲು ಹಾಕುತ್ತಿದ್ದೇನೆ ಎಂದು ಜಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರ ರಾಲಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದರು.
“ಒಂದು ವೇಳೆ ನಿಮಗೆ(ಕಾಂಗ್ರೆಸ್ ಮತ್ತು ಮೈತ್ರಿಕೂಟ) ತಾಕತ್ತಿದ್ದರೆ…ಪ್ರತಿಯೊಬ್ಬ ಪಾಕಿಸ್ತಾನಿ ಪ್ರಜೆಗೂ ಭಾರತೀಯ ಪೌರತ್ವ ಕೊಡಲು ತಯಾರಿದ್ದೇವೆ ಎಂದು ಬಹಿರಂಗವಾಗಿ ಘೋಷಿಸಲಿ. ಅಷ್ಟೇ ಅಲ್ಲ ಧೈರ್ಯ ಇದ್ದರೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿ ಮತ್ತೆ ಜಾರಿಗೊಳಿಸುತ್ತೇವೆ ಎಂದು ಹೇಳಲಿ ಎಂದು ಪ್ರಧಾನಿ ಮೋದಿ ಸವಾಲು ಹಾಕಿದ್ದಾರೆ.