ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದು, ಚಂದ್ರಯಾನ-3 ರ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡಿಂಗ್ ಮತ್ತು ಚಂದ್ರನ ಮೇಲ್ಮೈಯಲ್ಲಿ ರೋವರ್ ನಿಯೋಜನೆಗಾಗಿ ಇಸ್ರೋ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಅಭಿನಂದಿಸಲಿದ್ದಾರೆ.
ಪ್ರಧಾನಿ ಆಗಮಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ನಗರದಲ್ಲಿ ಬೃಹತ್ ರೋಡ್ ಶೋ ಆಯೋಜಿಸುವ ಮೂಲಕ ಅವರಿಗೆ ಅದ್ಧೂರಿ ಸ್ವಾಗತ ಕೋರಲು ಮುಂದಾಗಿದೆ ಎಂದು ಬಿಜೆಪಿ ಹಿರಿಯ ಶಾಸಕ ಆರ್.ಅಶೋಕ್ ಗುರುವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ “ಪ್ರಧಾನಿ ಮೋದಿ ಅವರು ಆ 26 ರಂದು ಬರುತ್ತಿದ್ದಾರೆ. ನಾವು ಅವರನ್ನು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ 6,000 ಕ್ಕೂ ಹೆಚ್ಚು ಜನರೊಂದಿಗೆ ಸ್ವಾಗತಿಸುತ್ತೇವೆ. ಅಲ್ಲಿ ಅವರು ಜನರನ್ನು ಉದ್ದೇಶಿಸಿ ಮಾತನಾಡಬಹುದು. ಬಿಜೆಪಿ ರಾಷ್ಟ್ರೀಯ ನಾಯಕ ಬಿಎಲ್ ಸಂತೋಷ್ ಅವರು ಪೀಣ್ಯದಲ್ಲಿ ಮೆಗಾ ರೋಡ್‌ಶೋ ಆಯೋಜಿಸಲು ನನ್ನೊಂದಿಗೆ ಮಾತನಾಡಿದ್ದಾರೆ, ನಾನು ಈ ಬಗ್ಗೆ ದಾಸರಹಳ್ಳಿ ಶಾಸಕ ಮುನಿರಾಜು ಅವರೊಂದಿಗೆ ಮಾತನಾಡಿದ್ದೇನೆ ಎಂದರು.
ಈ ಸಂತೋಷವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬೆಂಗಳೂರಿನ ಜನರಿಗೆ ಪ್ರಧಾನಿ ಅವಕಾಶ ನೀಡಿದ್ದಾರೆ.ನಾವು ಬೆಂಗಳೂರಿನ ಜನರು ಮೋದಿಯವರಿಗೆ ಭವ್ಯವಾದ ಸ್ವಾಗತವನ್ನು ನೀಡುತ್ತೇವೆ, ಏಕೆಂದರೆ ಇಸ್ರೋ ಎಂದರೆ ಬೆಂಗಳೂರು ಮತ್ತು ಬೆಂಗಳೂರು ಎಂದರೆ ಇಸ್ರೋ. ಪ್ರಧಾನಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಇಲ್ಲಿಗೆ ಬರುತ್ತಿದ್ದಾರೆ ಎಂದರು.
ಪ್ರಧಾನಮಂತ್ರಿಯವರ ಭೇಟಿಯ ವಿವರಗಳನ್ನು ಹಂಚಿಕೊಳ್ಳದಿದ್ದರೂ, ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ನಲ್ಲಿರುವ ಮಿಷನ್ಸ್ ಆಪರೇಷನ್ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಅಭಿನಂದಿಸಲಿದ್ದಾರೆ.