ಗಾಂಧಿನಗರ: ದೇಶದಲ್ಲಿ ಅತಿ ಉದ್ದದ ಕರಾವಳಿಯನ್ನು ಗುಜರಾತ್ ಹೊಂದಿದ್ದರೂ ಸ್ವಾತಂತ್ರ್ಯ ನಂತರ ಬಂದ ಸರ್ಕಾರಗಳು ಅದರ ಅಭಿವೃದ್ಧಿಗೆ ಮುಂದಾಗಿರಲಿಲ್ಲ. ಆದರೆ ಬಿಜೆಪಿ ಕಳೆದ 20 ವರ್ಷಗಳಲ್ಲಿ ರಾಜ್ಯದ ಕರಾವಳಿಯ ಸಮಗ್ರ ಅಭಿವೃದ್ಧಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ಭಾವ್‌ನಗರ, ಬಾತೋಡ್ ಮತ್ತು ಆಮ್ರೇಲಿ ಜಿಲ್ಲೆಗಳಲ್ಲಿ 6,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಗುರುವಾರ ಶಿಲಾನ್ಯಾಸ ನೆರವೇರಿಸಿದರು.
ನಂತರ ಭಾವ್‌ನಗರದಲ್ಲಿ ನಡೆದ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಪ್ರಚಾರಕ್ಕೆ ಹೆಚ್ಚು ಹಣ ವ್ಯರ್ಥ ಮಾಡದೇ ಗುಜರಾತ್‌ನ ಅನೇಕ ದೊಡ್ಡ ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ,’ ಎಂದರು.
“ಪ್ರಸ್ತುತ ಗುಜರಾತ್ ಕರಾವಳಿ ನಗರಗಳಲ್ಲಿ ವಿಶ್ವದ ಮೊದಲ ಸಿಎನ್‌ಜಿ ಟರ್ಮಿನಲ್, ಬ್ರೌನ್‌ಫೀಲ್ಡ್ ಬಂದರು ಅಭಿವೃದ್ಧಿ ಹಾಗೂ ಕಾರ್ಗೋ ಕಂಟೇನರ್ ಉತ್ಪಾದಕ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ,’ ಎಂದು ಹೇಳಿದರು.
ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾವ್‌ನಗರ ಮತ್ತು ಸೂರತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ಮೂಲಕ ಬಿಜೆಪಿ ಪರ ಪ್ರಚಾರ ನಡೆಸಿದರು.