ನವದೆಹಲಿ: ಕಾಂಗ್ರೆಸ್ ಪಕ್ಷ ಭಾರತವನ್ನು 21ನೇ ಶತಮಾನದತ್ತ ಕೊಂಡೊಯ್ದಿದೆ, ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನು ಮಧ್ಯಯುಗದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸೋನಿಯಾ ಗಾಂಧಿ ಅವರಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಬಳಿಕ ತಮ್ಮ ಮೊದಲ ಭಾಷಣದಲ್ಲೇ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ವಿದೇಶಿ ನೀತಿ ಚಿಂದಿ,ಚಿಂದಿಯಾಗಿದೆ, ತಮ್ಮ ವೈಯಕ್ತಿಕ ವರ್ಚಸ್ಸಿನಿಂದಾಗಿ ಎಲ್ಲವೂ ಒಬ್ಬ ವ್ಯಕ್ತಿಯ ಅಧೀನದಲ್ಲೇ ನಡೆಯುತ್ತಿದೆ. ಒಂದು ವೇಳೆ ನಾವು ಹಿಂದಡಿ ಇಟ್ಟಲ್ಲಿ ಮಾತ್ರವೇ ನಮ್ಮನ್ನು ಸೋಲಿಸಲು ಸಾಧ್ಯ. ನಾವು ಈಗ ಎದ್ದು ನಿಲ್ಲಬೇಕಾಗಿದೆ. ಕಾಂಗ್ರೆಸ್ ಯಾವತ್ತೂ ಹಿಂದಡಿ ಇಡುವುದಿಲ್ಲ ಎಂದು ರಾಹುಲ್ ಹೇಳಿದರು.
ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ಭಾರತೀಯ ಜನತಾ ಪಕ್ಷ ದ್ವೇಷ ಮತ್ತು ಕೋಮುವಾದವನ್ನು ಹರಡುತ್ತಿದೆ. ನಾವು ಒಗ್ಗಟ್ಟಾಗುವ ಮೂಲಕ ಅದನ್ನು ತಡೆಯಬೇಕಾಗಿದೆ. ಅವರು ಬೆಂಕಿಯನ್ನು ಹಚ್ಚುತ್ತಿದ್ದಾರೆ, ನಾವು ಅದನ್ನು ಆರಿಸುತ್ತಿದ್ದೇವೆ, ನಾವು ಇದೆಲ್ಲವನ್ನೂ ತಡೆಯಬೇಕಾದರೆ ನಾವು ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಗಲಭೆಗಳೇ ಹೆಚ್ಚಾಗುತ್ತಿದೆ.ದೇಶದಲ್ಲಿನ ದ್ವೇಷದ ರಾಜಕಾರಣದ ವಿರುದ್ಧ ಹೋರಾಡೋಣ. ನಾವು ಎಲ್ಲರನ್ನೂ ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇವೆ. ರಾಜಕೀಯ ವಿಚಾರಗಳಿಗೆ ಜನರನ್ನು ಬಳಸಿಕೊಳ್ಳಲಾಗುತ್ತಿದೆ. ಬೇರೆಯವರನ್ನು ತುಳಿಯಲು ರಾಜಕೀಯವನ್ನು ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ. ದೇಶದ ಸಹೋದರತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಕಾಂಗ್ರೆಸ್ ಗ್ರ್ಯಾಂಡ್ ಓಲ್ಡ್ ಅಂಡ್ ಯಂಗ್ ಪಾರ್ಟಿ. ಅವರು ಭಿನ್ನತೆ ಸೃಷ್ಟಿಸುತ್ತಿದ್ದಾರೆ, ನಾವು ಏಕತೆ ಸೃಷ್ಟಿಸುತ್ತಿದ್ದೇವೆ ಎಂದರು.