Advertisement

ಪಿಎಂ ಸ್ವನಿಧಿ ಯೋಜನೆಯಲ್ಲಿ ಹು-ಧಾ ಪಾಲಿಕೆಗೆ ಮೊದಲ ಸ್ಥಾನ

03:32 PM Aug 19, 2020 | Suhan S |

ಹುಬ್ಬಳ್ಳಿ: ಬೀದಿ ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಉತ್ತೇಜನ ನೀಡುವ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ (ಪಿಎಂ ಸ್ವನಿಧಿ) ಯೋಜನೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ವ್ಯಾಪಾರಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಜು.1 ರಿಂದ ಆರಂಭವಾಗಿರುವ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಕೆ ಹಾಗೂ ಸಾಲ ಮಂಜೂರಾತಿಯಲ್ಲಿ ರಾಜ್ಯದ 284 ಸ್ಥಳೀಯ ಸಂಸ್ಥೆಗಳ ಪೈಕಿ ಹು-ಧಾ ಮಹಾನಗರ ಪಾಲಿಕೆ ಮೊದಲ ಸ್ಥಾನದಲ್ಲಿದೆ.

Advertisement

ಕೋವಿಡ್ ಲಾಕ್‌ಡೌನ್‌ನಿಂದ ಪ್ರತಿಕೂಲ ಪರಿಣಾಮ ಅನುಭವಿಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಜೀವನೋಪಾಯಕ್ಕಾಗಿ ಕೇಂದ್ರ ಸರಕಾರ ಪಿಎಂ ಸ್ವನಿಧಿ ವಿಶೇಷ ಕಿರು ಸಾಲ ಯೋಜನೆಯನ್ನು ಯಶಸ್ವಿಗೊಳಿಸಿ ಸಂಕಷ್ಟದಲ್ಲಿರುವ ಬೀದಿ ವ್ಯಾಪಾರಿಗಳಿಗೆ ನೆರವಾಗಲು ಮಹಾನಗರ ಪಾಲಿಕೆ ಮುಂದಾಗಿದೆ. ಖುದ್ದಾಗಿ ಪಾಲಿಕೆಯ ನಲ್ಮ್ ಯೋಜನೆಯ ಅಧಿಕಾರಿಗಳು ನೇರವಾಗಿ ವ್ಯಾಪಾರಿಗಳ ಬಳಿಗೆ ತೆರಳಿ ಯೋಜನೆ ಕುರಿತು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಕರಪತ್ರ ಮೂಲಕ ತಿಳಿಸಲಾಗುತ್ತಿದೆ. ಇನ್ನು ಮಾರಾಟ ಸಮಿತಿ ಪದಾಧಿಕಾರಿಗಳ ಮೂಲಕವೂ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ 1500 ಅರ್ಜಿಗಳು ಸಲ್ಲಿಕೆಯಾಗಿದ್ದು, 215 ವ್ಯಾಪಾರಿಗಳಿಗೆ ಸಾಲ ಮಂಜೂರಾಗಿದೆ. ಉಳಿದ ಅರ್ಜಿಗಳು ಪರಿಶೀಲನೆಯಲ್ಲಿವೆ. ಅರ್ಜಿ ಸಲ್ಲಿಕೆ ಹಾಗೂ ಸಾಲ ಮಂಜೂರಾತಿಯಲ್ಲಿ ಪಾಲಿಕೆ ಮುಂಚೂಣಿಯಲ್ಲಿದ್ದು, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆನ್‌ಲೈನ್‌ ಮೂಲಕ ಅರ್ಜಿ ಹಾಕಲು ಉತ್ತೇಜನ ನೀಡಲಾಗುತ್ತಿದೆ. ಉಳಿದ ಸ್ಥಳೀಯ ಸಂಸ್ಥೆಗಳು ಸಾಲಾ ಮಂಜೂರಾತಿಯಲ್ಲಿ ಎರಡಂಕಿ ದಾಟಿಲ್ಲ. ಅರ್ಜಿ ಸಲ್ಲಿಕೆಯಲ್ಲೂ ಕೂಡ ಮೂರಂಕಿ ದಾಟಿಲ್ಲ.

ಮಹಾನಗರ ಪಾಲಿಕೆ ವತಿಯಿಂದ ಸಮೀಕ್ಷೆ ಮಾಡಿ 6173 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ನೀಡಲಾಗಿದೆ. ಇವರನ್ನು “ಎ’ ಕೆಟಗರಿಯಲ್ಲಿರಿಸಿದ್ದು, ಸಮೀಕ್ಷೆ ಸಮಯದಲ್ಲಿ  ಪತ್ತೆಯಾಗದ ಬಿ, ಸಿ ಹಾಗೂ ದಿ ಕೆಟಗೆರಿಯ ವ್ಯಾಪಾರಿಗಳಿಗೆ ಸಾಲ ದೊರೆಯುವ ನಿಟ್ಟಿನಲ್ಲಿ ಪ್ರಮಾಣ ಪತ್ರದೊಂದಿಗೆ ಶಿಫಾರಸ್ಸು ಪತ್ರ ನೀಡುವ ಕೆಲಸ ನಡೆಯುತ್ತಿದೆ. ಇಷ್ಟೊಂದು ವ್ಯಾಪಾರಿಗಳ ಪೈಕಿ ಕನಿಷ್ಟ 4000 ವ್ಯಾಪಾರಿಗಳಿಗೆ ಈ ಸೌಲಭ್ಯ ಕಲ್ಪಿಸಲು ಗುರಿ ಹೊಂದಿದ್ದಾರೆ. ಬೀದಿ ವ್ಯಾಪಾರಿಗಳ ಗುರುತಿಸುವಿಕೆಯ ಸಮೀಕ್ಷೆಯಲ್ಲೂ ಉಳಿದೆಲ್ಲಾ ಸಂಸ್ಥೆಗಳಿಗಿಂತ ಇಲ್ಲಿನ ಪಾಲಿಕೆ ಸಾಕಷ್ಟು ಮುಂದಿದೆ.

ಏನಿದು ಯೋಜನೆ?: ಈ ಯೋಜನೆಯಲ್ಲಿ ಒಂದು ವರ್ಷದ ಅವಧಿಗೆ 10 ಸಾವಿರ ರೂ. ಸಾಲ ನೀಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿದಂತೆ ಇನ್ನಿತರೆ ಹಣಕಾಸು ಸಂಸ್ಥೆಗಳ ಮೂಲಕ ಈ ಸಾಲ ಪಡೆಯಬಹುದಾಗಿದ್ದು, ಶೇ.7 ಬಡ್ಡಿ ಸಬ್ಸಿಡಿ ದೊರೆಯಲಿದೆ. ಉಳಿದ ಬಡ್ಡಿಯನ್ನು ವ್ಯಾಪಾರಿ ಪಾವತಿಸಬೇಕು. ಒಂದು ವೇಳೆ ಸರಿಯಾದ ಸಮಯಕ್ಕೆ ಕಂತು ಪಾವತಿಸಿದರೆ ಎರಡನೇ ವರ್ಷಕ್ಕೆ 20 ಸಾವಿರ ರೂ. ಸಾಲ ದೊರೆಯಲಿದೆ. ಪಿಎಂ ಸ್ವನಿಧಿ ಪೋರ್ಟಲ್‌ನಲ್ಲಿ ನೇರವಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಮಹಾನಗರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವ ಪ್ರಕ್ತಿಯೆ ನಡೆದಿದೆ. ಆಧಾರ ಲಿಂಕ್‌ ಹೊಂದಿದ ಮೊಬೈಲ್‌ನೊಂದಿಗೆ ಆಧಾರ, ಕಾರ್ಡ್‌, ಮತದಾರ ಗುರುತಿನ ಚೀಟಿ ಹಾಗೂ ಪಾಲಿಕೆಯಿಂದ ನೀಡಿರುವ ಗುರುತಿನ ಚೀಟಿಯೊಂದಿಗೆ ಸೇವಾ ಕೇಂದ್ರಗಳಿಗೆ ತೆರಳಿದರೆ ಅವರೇ ಅರ್ಜಿ ಸಲ್ಲಿಸುತ್ತಿದ್ದಾರೆ.

ಡಿಜಿಟಲ್‌ ವಹಿವಾಟಿಗೆ ಉತ್ತೇಜನ: ಈ ಸಾಲ ಪಡೆದ ವ್ಯಾಪಾರಿಗಳಿಗೆ ಡಿಜಿಟಲ್‌ ವಹಿವಾಟು ನೀಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಇದಕ್ಕೆ ಬೇಕಾದ ಅಗತ್ಯ ತರಬೇತಿ, ಮಾಹಿತಿ ಕೂಡ ಪಾಲಿಕೆಯ ನಲ್ಮ್ ಯೋಜನೆಯ ವಿಭಾಗದಿಂದ ನೀಡಲಾಗುತ್ತದೆ. ವಿವಿಧ ಸಂಸ್ಥೆಗಳ ಕ್ಯೂಆರ್‌ ಕೋಡ್‌ ಮೂಲಕ ಡಿಜಿಟಲ್‌ ವಹಿವಾಟು ನಡೆಸಬೇಕಿದ್ದು, ಪ್ರತಿಯೊಂದು ವಹಿವಾಟಿಗೆ 1ರೂ. ದೊರೆಯಲಿದೆ. ಡಿಜಿಟಲ್‌ ವಹಿವಾಟಿಗೆ ಹೆಚ್ಚು ಒತ್ತು ನೀಡಿದರೆ ಬ್ಯಾಂಕ್‌ ಪಾವತಿಸುವ ಬಡ್ಡಿಯನ್ನು ಕ್ಯಾಶ್‌ಬ್ಯಾಕ್‌ ಹಣದಿಂದ ಪಾವತಿಸಬಹುದಾಗಿದೆ.

Advertisement

ಬೀದಿ ಬದಿ ವ್ಯಾಪಾರಿಗಳಿಗೆ ಇದೊಂದು ಒಳ್ಳೆಯ ಯೋಜನೆಯಾಗಿದ್ದು, ಮಹಾನಗರ ವ್ಯಾಪ್ತಿಯ ಎಲ್ಲಾ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಬೇರೆ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದರೆ ಉತ್ತಮ ಪ್ರಗತಿಯಿದೆ. ಅರ್ಹ ಪ್ರತಿಯೊಬ್ಬ ವ್ಯಾಪಾರಿಗೂ ಈ ಯೋಜನೆ ತಲುಪಿಸುವ ಗುರಿ ಹೊಂದಿದ್ದೇವೆ.  – ಡಾ| ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ

ತರಕಾರಿ, ಹಣ್ಣು, ತಿಂಡಿ ತಿನಿಸು, ಉಡುಪು ಸೇರಿದಂತೆ ಯಾವುದೇ ವ್ಯಾಪಾರವನ್ನು ಬೀದಿ ಬದಿ ಮಾರಾಟ ಮಾಡುತ್ತಿದ್ದು, ಪಾಲಿಕೆಯಿಂದ ಗುರುತಿನ ಚೀಟಿ ಪಡೆದವರು ಹಾಗೂ ಪಡೆಯದವರು ಕೂಡ ಅರ್ಜಿ ಸಲ್ಲಿಸಬಹುದು. ಮಹಾನಗರ ಪಾಲಿಕೆ ಆವರಣದಲ್ಲಿರುವ ಕಚೇರಿಯಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.  ರಮೇಶ ನೂಲ್ವಿ, ಸಮುದಾಯ ಸಂಘಟನಾಧಿಕಾರಿ, ನಲ್ಮ್ ಯೋಜನೆ

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next