ಕೊಲಂಬೋ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಜನರು ರೊಚ್ಚಿಗೆದ್ದು ಲಂಕಾ ಅಧ್ಯಕ್ಷ ಗೊಟಬಯಾ ರಾಜಪಕ್ಸ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ, ತೀವ್ರ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ರಾನಿಲ್ ವಿಕ್ರಮಸಿಂಘೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಇಚ್ಛೆ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗೊಟಬಯಾ ಪರಾರಿ: ಶ್ರೀಲಂಕಾದಲ್ಲಿ ಅರಾಜಕತೆ ಹೇಗಿದೆ ಎಂಬುದಕ್ಕೆ ಈ ವೈರಲ್ ವಿಡಿಯೋಗಳೇ ಸಾಕ್ಷಿ!
ಪ್ರತಿಭಟನಾಕಾರರು ಅಧ್ಯಕ್ಷ ಗೊಟಬಯಾ ರಾಜಪಕ್ಸ ನಿವಾಸಕ್ಕೆ ಮುತ್ತಿಗೆ ಹಾಕುವ ಮುನ್ನ ಪರಾರಿಯಾಗಿದ್ದಾರೆ. ಆಕ್ರೋಶಗೊಂಡ ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸದೊಳಕ್ಕೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿ, ಅಟ್ಟಹಾಸಗೈಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ತುರ್ತು ಸಭೆ ಕರೆದಿದ್ದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಶನಿವಾರ ಸಂಜೆ, ತನ್ನ ಹುದ್ದೆಗೆ ರಾಜೀನಾಮೆ ನೀಡುವ ಇಚ್ಛೆ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
ಗೊಟಬಯಾ ರಾಜಪಕ್ಸೆ ಅವರು ತಕ್ಷಣವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಾಯ ಸಭೆಯಲ್ಲಿ ಕೇಳಿ ಬಂದಿದೆ. ಯಾವುದೇ ಕಾರಣಕ್ಕೂ ಗೊಟಬಯಾ ರಾಜೀನಾಮೆ ನೀಡುವ ವಿಚಾರದಲ್ಲಿ ವಿಳಂಬ ಮಾಡಕೂಡದು. ದೇಶದಲ್ಲಿನ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ಶ್ರೀಲಂಕಾದ ಮುಖಂಡ ಜೀವನ್ ಥೋಂಡಮನ್ ತಿಳಿಸಿದ್ದಾರೆ.