ಮನಿಲಾ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಂಗಳವಾರ 10 ಆಸಿಯಾನ್ ದೇಶಗಳ ಎಲ್ಲ ನಾಯಕರಿಗೆ ಮುಂದಿನ ವರ್ಷ 2018ರ ಪ್ರಜಾಭುತ್ವ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವಂತೆ ಆಹ್ವಾನ ನೀಡಿದರು.
ದಕ್ಷಿಣ ಚೀನ ಸಮುದ್ರದಲ್ಲಿ ಚೀನ ಹೆಚ್ಚೆಚ್ಚು ಆಕ್ರಮಣಕಾರಿಯಾಗುತ್ತಿರುವಂತೆಯೇ ಆಸಿಯಾನ್ ನಾಯಕರಿಗೆ ಭಾರತದ ಪ್ರಜಾಪ್ರಭುತ್ವ ದಿನದಂದು ಪಾಲ್ಗೊಳುವುದಕ್ಕೆ ಪ್ರಧಾನಿ ಮೋದಿ ಆಹ್ವಾನ ನೀಡಿರುವುದು ಚೀನಕ್ಕೆ ಸೆಡ್ಡು ಹೊಡೆಯುವಂತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಮನಿಲಾದಲ್ಲಿ ನಡೆದ 15ನೇ ಆಸಿಯಾನ್-ಭಾರತ ಶೃಂಗದಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಅವರು “ಭಾರತ ಆಸಿಯಾನ್‌ಗೆ ನಿಯಮಾಧಾರಿತ ಪ್ರಾದೇಶಿಕ ಭದ್ರತೆಯ ಸಂರಚನೆಯನ್ನು ಹೊಂದುವುದಕ್ಕೆ ಎಲ್ಲ ರೀತಿಯ ಬೆಂಬಲ ನೀಡುತ್ತದೆ’ ಎಂದು ಹೇಳಿದರು. ಆ ಮೂಲಕ ಭಾರತವು ಆಸಿಯಾನ್ ದೇಶಗಳ ಪ್ರಾದೇಶಿಕ ಹಿತಾಸಕ್ತಿ ಹಾಗೂ ಅವುಗಳ ಶಾಂತಿಯು ಅಭಿವೃದ್ಧಿಗೆ ನೆರವಾಗಲಿದೆ ಎಂದರು.
ಭಯೋತ್ಪಾದನೆ ವಿರುದ್ಧ ಆಸಿಯಾನ್ ದೇಶಗಳು ಜಾಗತಿಕ ಮಟ್ಟದಲ್ಲಿ ಒಗ್ಗೂಡಿ ಹೋರಾಡಬೇಕು ಎಂದು ಮೋದಿ ಕರೆ ನೀಡಿದರು.
ಆಸಿಯಾನ್ – ಇಂಡಿಯಾ ಶೃಂಗ ಸಭೆಯು ಪೂರ್ವ ಏಶ್ಯ ಶೃಂಗದ ಜತೆಜತೆಗೆಯೇ ಏಶ್ಯ ಪೆಸಿಫಿಕ್ ಪ್ರಾಂತ್ಯ ವೇದಿಕೆಯಲ್ಲಿ ಜರಗುತ್ತಿದೆ. ಪೂರ್ವ ಏಶ್ಯ ಶೃಂಗದಲ್ಲಿ ಭಾರತ, ಚೀನ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಅಮೆರಿಕ ಮತ್ತು ರಶ್ಯ ಇವೆ.
ಮೋದಿ ಆಹ್ವಾನದ ಮೇರೆಗೆ 2018ರ ಭಾರತದ ಗಣರಾಜ್ಯೋತ್ಸವ ದಿನದ ಸಂಭ್ರಮಾಚರಣೆಯಲ್ಲಿ ಎಲ್ಲ 10 ಆಸಿಯಾನ್ ದೇಶಗಳ ಮುಖ್ಯಸ್ಥರು (ಇಂಡೋನೇಶ್ಯ, ಮಲೇಶ್ಯ, ಫಿಲಪ್ಪೀನ್ಸ್, ಸಿಂಗಾಪುರ, ಥಾಯ್ಲಂಡ್, ಬ್ರುನೇಯಿ, ಕ್ಯಾಂಬೋಡಿಯಾ, ಲಾವೋಸ್, ಮ್ಯಾನ್‌ಮಾರ್ ಮತ್ತು ವಿಯೆಟ್ನಾಮ್) ಭಾಗವಹಿಸಲಿದ್ದಾರೆ.