ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1ರಂದು ದೇಶದಲ್ಲಿ 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಸಂವಹನ ಸಚಿವಾಲಯದ ನ್ಯಾಷನಲ್ ಬ್ರಾಡ್ ಬ್ಯಾಂಡ್ ಮಿಷನ್ ಶನಿವಾರ(ಸೆಪ್ಟೆಂಬರ್ 24) ಟ್ವೀಟ್ ಮಾಡಿದೆ.
ಇದನ್ನೂ ಓದಿ:ಇಲ್ಲಿದೆ ಪುರಾತನ ಶಿವ ದೇವಾಲಯ: 12 ವರ್ಷಕೊಮ್ಮೆ ಇಲ್ಲಿನ ಶಿವಲಿಂಗಕ್ಕೆ ಸಿಡಿಲು ಬಡಿಯುತ್ತೆ!
ಭಾರತದ ಡಿಜಿಟಲ್ ವ್ಯವಸ್ಥೆ ಮತ್ತು ಸಂವಹನ, ಸಂಪರ್ಕವನ್ನು ಅತ್ಯಾಧುನಿಕ ಸೌಲಭ್ಯದತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕೊಂಡೊಯ್ಯುವ ನಿಟ್ಟಿನಲ್ಲಿ 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದೆ.
ಆದರೆ ಎನ್ ಬಿಎಂ (ನ್ಯಾಷನಲ್ ಬ್ರಾಡ್ ಬ್ಯಾಂಡ್ ಮಿಷನ್) ಟ್ವೀಟ್ ಕೆಲವೇ ಹೊತ್ತಿನಲ್ಲಿ ಡಿಲೀಟ್ ಮಾಡಿದೆ ಎಂದು ವರದಿ ವಿವರಿಸಿದೆ. ಇಂಡಸ್ಟ್ರಿ ಮಾಹಿತಿ ಪ್ರಕಾರ, ಭಾರತದಲ್ಲಿ 5 ಜಿ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆದಿಲ್ಲ. ನೂತನ ತಂತ್ರಜ್ಞಾನಕ್ಕೆ ವಿಧ್ಯುಕ್ತ ಚಾಲನೆ ನೀಡಲು ಇನ್ನೂ ಕೆಲವು ದಿನಗಳ ಕಾಲಾವಕಾಶ ಬೇಕಾಗಿದೆ ಎಂದು ತಿಳಿಸಿದೆ.
ಪ್ರಸಕ್ತ ಸಾಲಿನ ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣದಲ್ಲಿ ಭಾರತದಲ್ಲಿ ಶೀಘ್ರವೇ 5ಜಿ ಸೇವೆ ಆರಂಭಿಸಲಾಗುವುದು ಎಂದು ತಿಳಿಸಿದ್ದರು. ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಕಳೆದು ತಿಂಗಳು, ದೇಶದಲ್ಲಿ 5ಜಿ ಸೇವೆಯನ್ನು ಅಕ್ಟೋಬರ್ 12ರೊಳಗೆ ಆರಂಭಿಸುವ ನಿರೀಕ್ಷೆ ಇದೆ ಎಂದು ಹೇಳಿರುವುದಾಗಿ ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.