ನವದೆಹಲಿ: ರಾಷ್ಟ್ರಪತಿ ಭಾಷಣಕ್ಕೆ ಲೋಕಸಭೆಯಲ್ಲಿ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸ್ಥಿತಿ ಸುಧಾರಣೆಗೊಂಡ ಪರಿಣಾಮ ದೀರ್ಘಕಾಲದ ನಂತರ ಸಿನಿಮಾ ಹಾಲ್ ಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ:ಫೆ: 11: ಹನುಮಗಿರಿ ಕ್ಷೇತ್ರದಲ್ಲಿ ಹುತಾತ್ಮ ಯೋಧರ ಅಮರಗಿರಿ ಅಮರಜ್ಯೋತಿ ಮಂದಿರ ಲೋಕಾರ್ಪಣೆ
ಜಮ್ಮು-ಕಾಶ್ಮೀರದಲ್ಲಿ ರಾಜಕೀಯ ಪರಿಸ್ಥಿತಿಗಳು ಬದಲಾದ ಹಿನ್ನೆಲೆಯಲ್ಲಿ ಹಲವು ವರ್ಷಗಳ ಬಳಿಕ ಶ್ರೀನಗರದ ಚಿತ್ರಮಂದಿರಗಳೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು.
ಜಮ್ಮು-ಕಾಶ್ಮೀರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಕೊನೆಯ ಹಂತದ ಬಗ್ಗೆಯೂ ಪ್ರಧಾನಿ ಮೋದಿ ಉಲ್ಲೇಖಿಸಿದ್ದು, 90ರ ದಶಕದಲ್ಲಿ ತಾವು ಶ್ರೀನಗರದ ಲಾಲ್ ಚೌಕ್ ನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಧ್ವಜಾರೋಹಣ ಸಂದರ್ಭದಲ್ಲಿ ಭಯೋತ್ಪಾದಕರು ಬೆದರಿಕೆ ಹಾಕಿದ್ದನ್ನು ನೆನಪಿಸಿಕೊಂಡರು. ಅಷ್ಟೇ ಅಲ್ಲ ಈ ಬೆದರಿಕೆಯ ಹೊರತಾಗಿಯೂ 1991ರಲ್ಲಿ ಐತಿಹಾಸಿಕ ಲಾಲ್ ಚೌಕ್ ನಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿರುವುದಾಗಿ ಹೇಳಿದರು.
Related Articles
ರಾಹುಲ್ ಗಾಂಧಿ ಮತ್ತು ವಿಪಕ್ಷ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ ಅವರು, ಇತ್ತೀಚೆಗೆ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಜಮ್ಮು-ಕಾಶ್ಮೀರದಿಂದ ಹಿಂದಿರುಗಿ ಬಂದವರು ಅಲ್ಲಿ ಜನರು ಈಗ ಎಷ್ಟು ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂಬುದನ್ನು ನೋಡಿರಬಹುದು ಎಂದು ತಿರುಗೇಟು ನೀಡಿದ್ದಾರೆ.
ಪಠಾಣ್ ಸಿನಿಮಾ ಹೆಸರನ್ನು ಹೇಳಿದ್ದರೆ…
ಜಮ್ಮು-ಕಾಶ್ಮೀರದಲ್ಲಿ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು…ಪ್ರಧಾನಿ ಮೋದಿ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾದ ಹೆಸರನ್ನು ಪ್ರಸ್ತಾಪಿಸಿದ್ದಾರೆಯೇ ಎಂದು ಪ್ರಶ್ನಿಸಿರುವುದಾಗಿ ವರದಿಯಾಗಿದೆ.
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ದೇಶ, ವಿದೇಶಗಳಲ್ಲಿ ಭರ್ಜರಿ ಗಳಿಕೆ ಕಂಡಿರುವ ಬಗ್ಗೆ ಪ್ರಧಾನಿ ಮೋದಿ ಅವರು ಉಲ್ಲೇಖಿಸದಿದ್ದರೂ, ಪ್ರಧಾನಿಯವರು ನಿಜಕ್ಕೂ ಪಠಾಣ್ ಸಿನಿಮಾವನ್ನು ಉದ್ದೇಶಿಸಿಯೇ ಹೇಳಿಕೆ ನೀಡಿರಬಹುದು ಎಂಬುದು ಖಾನ್ ಅಭಿಮಾನಿಗಳನ್ನು ಅಚ್ಚರಿ ಪಡುವಂತೆ ಮಾಡಿರುವುದಾಗಿ ವರದಿ ವಿವರಿಸಿದೆ.