ಅಹಮದಾಬಾದ್:ಗುಜರಾತಿನ ಸಾಬರಮತಿ ನದಿ ತೀರದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಇರುವ ಸ್ಥಳಕ್ಕೆ ತಲುಪುವ ದೇಶದ ಮೊದಲ ಸೀ ಪ್ಲೇನ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಅಕ್ಟೋಬರ್ 31, 2020) ಚಾಲನೆ ನೀಡಿದ್ದಾರೆ.
ಕೇವಾಡಿಯಾದ ಸರ್ದಾರ್ ಸರೋವರ ಡ್ಯಾಮ್ ಸಮೀಪದಿಂದ ಎರಡು ಇಂಜಿನ್ ಗಳ ಸೀ ಪ್ಲೇನ್ ಸೇವೆಯನ್ನು ಉದ್ಘಾಟಿಸಿದರು. ವಿಧ್ಯುಕ್ತವಾಗಿ ಆರಂಭಗೊಂಡ ಮೊದಲ ಸೀ ಪ್ಲೇನ್ ಸಾಬರಮತಿ ನದಿ ತೀರದಿಂದ ಹೊರಟು ಕೇವಾಡಿಯಾದ ಏಕತಾ ಮೂರ್ತಿ ಇರುವ ಸ್ಥಳದಲ್ಲಿ ಲ್ಯಾಂಡ್ ಆಗಿರುವುದಾಗಿ ವರದಿ ತಿಳಿಸಿದೆ.
19 ಸೀಟುಗಳನ್ನು ಹೊಂದಿರುವ ಈ ಸೀ ಪ್ಲೇನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣ ಬೆಳೆಸಿದ್ದು 40 ನಿಮಿಷದಲ್ಲಿ ಏಕತಾ ಪ್ರತಿಮೆ ಸ್ಥಳದಲ್ಲಿ ಬಂದಿಳಿದಿತ್ತು. ಅಹಮದಾಬಾದ್ ನ ಸಾಬರಮತಿ ನದಿ ತೀರದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಮೂರ್ತಿ ಇರುವ ಕೇವಾಡಿಯಾಕ್ಕೆ 200 ಕಿಲೋ ಮೀಟರ್ ದೂರವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಕಿಗೆ ಹೋಂ ವರ್ಕ್ ತೋರಿಸಲು 40 ಕಿ.ಮೀ ಪ್ರಯಾಣಿಸಿದ ಎಂಟರ ಬಾಲಕ
ಏನಿದು ಸೀ ಪ್ಲೇನ್?
ಸೀ ಪ್ಲೇನ್ ಸೇವೆ ದೇಶದಲ್ಲಿಯೇ ಪ್ರಥಮವಾಗಿದ್ದು, ಇದು 19 ಆಸನಗಳನ್ನು ಹೊಂದಿದೆ. ಸೀ ಪ್ಲೇನ್ ನೀರು ಮತ್ತು ನೆಲದ ಮೇಲಿಂದ ಹಾರಾಟ ನಡೆಸಬಲ್ಲದು. ಎರಡು ಮಾದರಿಯ ಸೀ ಪ್ಲೇನ್ ಹಾರಾಟ ನಡೆಸಲಿದ್ದು, ಒಂದರಲ್ಲಿ 19 ಆಸನ, ಮತ್ತೊಂದರಲ್ಲಿ 12 ಪ್ರಯಾಣಿಕರನ್ನು ಕರೆದೊಯ್ಯಬಹುದಾಗಿದೆ.
ಸೀ ಪ್ಲೇನ್ ಪ್ರಯಾಣ ದರ ಎಷ್ಟು?
200 ಕಿಲೋ ಮೀಟರ್ ಸೀ ಪ್ಲೇನ್ ನಲ್ಲಿ ಒಬ್ಬರು ಪ್ರಯಾಣಿಸಬೇಕಾದರೆ 4,800 ರೂಪಾಯಿ ಟಿಕೆಟ್ ದರ ಇದೆ. ಇದು ಒಂದು ಬಾರಿಯ ಪ್ರಯಾಣಕ್ಕೆ ತಗಲುವ ದರವಾಗಿದೆ. ಅಕ್ಟೋಬರ್ 30ರಿಂದ ಸೀ ಪ್ಲೇನ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿತ್ತು. ಸೀ ಪ್ಲೇನ್ ಅಹಮದಾಬಾದ್ ನ ಸಾಬರಮತಿ ನದಿ ತೀರದಿಂದ 10.15ಕ್ಕೆ ಹೊರಡಲಿದ್ದು, ಕೇವಾಡಿಯಾದ ಏಕತಾ ಪ್ರತಿಮೆ ಬಳಿ 10.45ಕ್ಕೆ ತಲುಪಲಿದೆ.