ಅಹಮದಾಬಾದ್:ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ – ಮುಂಬೈ ನಡುವಿನ 508 ಕಿ.ಮೀ ಉದ್ದದ ಭಾರತದ ಮೊದಲ ಬುಲೆಟ್ ಟ್ರೈನ್ ಮಾರ್ಗದ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.
ಬುಲೆಟ್ ಟ್ರೈನ್ ಕಾಮಗಾರಿಯಿಂದ ಉದ್ಯೋಗ ಸೃಷ್ಟಿ: ಮೋದಿ
ದೇಶದ ಕ್ಷಿಪ್ರ ಅಭಿವೃದ್ಧಿಗೆ ಸಮಯ ಬಂದಿದೆ. ಮುಂಬೈ, ಅಹಮದಾಬಾದ್ ನಡುವೆ ಬುಲೆಟ್ ರೈಲು ಓಡಾಡಲಿದೆ. ಫಾಸ್ಟ್ ಟ್ರ್ಯಾಕ್ ನಲ್ಲಿ ಹೊಸ ಭಾರತ ನಿರ್ಮಾಣವಾಗುತ್ತಿದೆ. ಇದು ಭಾರತ ಮತ್ತು ಜಪಾನ್ ಪಾಲಿಗೆ ಐತಿಹಾಸಿಕ ದಿನವಾಗಿದೆ. ಒಂದು ದೇಶದ ಅಭಿವೃದ್ಧಿಗೆ ಸಾರಿಗೆ ವ್ಯವಸ್ಥೆ ತುಂಬಾ ಮುಖ್ಯ. . ಬುಲೆಟ್ ಟ್ರೈನ್ ಕಾಮಗಾರಿಯಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ವಿಶ್ವದ ಪ್ರಬಲ ನಾಯಕ ಜಪಾನ್ ಭಾರತದ ಮಿತ್ರ. ಹಾಗಾಗಿ ಭಾರತದ ಬಹುದೊಡ್ಡ ಕನಸು ನನಸಾಗುವ ಸಮಯ ಬಂದಿದೆ. ಜಪಾನ್ ತಂತ್ರಜ್ಞಾನ ಅಳವಡಿಸಿಕೊಂಡು ಬುಲೆಟ್ ರೈಲು ಯೋಜನೆ ಅನುಷ್ಠಾನಗೊಳ್ಳಲಿದೆ. ಬುಲೆಟ್ ರೈಲಿನಲ್ಲಿ ಸುವ್ಯವಸ್ಥೆ, ಸುರಕ್ಷತೆ ಎರಡೂ ಇದೆ ಎಂದರು.
ಭಾರತದಲ್ಲಿ ಆರ್ಥಿಕ ಅಭಿವೃದ್ಧಿಯ ಅಗತ್ಯವಿದೆ. ಈ ಯೋಜನೆಗೆ ಜಪಾನ್ 88 ಸಾವಿರ ಕೋಟಿ ರೂಪಾಯಿ ಸಾಲ ನೀಡಲಿದೆ. ಈ ಯೋಜನೆ ಪೂರ್ಣಗೊಂಡಾಗ 2,3 ಗಂಟೆಯಲ್ಲಿ ಮುಂಬೈ ತಲುಪಬಹುದು. ಸಮಯಕ್ಕೆ ತಕ್ಕಂತೆ ಬದಲಾವಣೆ ತರಬೇಕು, ಆ ನಿಟ್ಟಿನಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ ಎಂದು ಹೇಳಿದರು.