ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ, ದೇಶದ ಮೊದಲ ಮಹಿಳೆ, ಮೆಲಾನಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ವೇತಭವನಕ್ಕೆ ಸಂಭಮೋಲ್ಲಾಸಗಳೊಂದಿಗೆ ಬರಮಾಡಿಕೊಂಡರಲ್ಲದೆ ಅದ್ದೂರಿಯ ರತ್ನಗಂಬಳಿ ಸ್ವಾಗತ ನೀಡಿದರು.
ಶ್ವೇತ ಭವನದ ರೋಸ್ ಗಾರ್ಡನ್‌ನಲ್ಲಿ ಜಂಟಿ ಹೇಳಿಕೆ ಹೊರಡಿಸಿದ ಬಳಿಕ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರು ಪರಸ್ಪರ ಅಪ್ಪಿಕೊಂಡು ವೈಯಕ್ತಿಕ ನೆಲೆಯಲ್ಲಿ ಹಾಗೂ ತಮ್ಮ ದೇಶಗಳ ನೆಲೆಯಲ್ಲಿ ಸದೃಢ ಬಾಂಧವ್ಯ ಇರುವುದನ್ನು ತೋರ್ಪಡಿಸಿದರು.
ಭೇಟಿಯ ಬಳಿಕ ಶ್ವೇತ ಭವನದಿಂದ ನಿರ್ಗಮಿಸುವಾಗಲೂ ಪ್ರಧಾನಿ ಮೋದಿ ಅವರು ತಾವೇ ಮುಂದಾಗಿ ಮತ್ತೂಮ್ಮೆ ಟ್ರಂಪ್ ಅವರನ್ನು ಆಲಂಗಿಸಿದರು.
ಉಭಯ ನಾಯಕರಲ್ಲಿನ ಪ್ರೀತಿ, ವಿಶ್ವಾಸ, ಬಾಂಧ್ಯ ಎಷ್ಟು ಗಟ್ಟಿಯಾಗಿದೆ ಎಂಬುದು ಅವರ ಹಾವಭಾವ, ಮುಖಭಾವ ಹಾಗೂ ದೇಹ ಭಾಷೆಗಳಲ್ಲಿ ಅತ್ಯಂತ ಸ್ಪಷ್ಟವಾಗಿತ್ತು.
ಟ್ರಂಪ್ ಅವರೊಂದಿಗೆ ಸಾಹಚರ್ಯದ ಉದ್ದಕ್ಕೂ ಪ್ರಧಾನಿ ಮೋದಿ ನಗುಮೊಗದಿಂದ ಇದ್ದು ಟ್ರಂಪ್ ಜತೆಗಿನ ದೃಢವಾದ ಹಸ್ತಲಾಘವದಲ್ಲಿ ಉಭಯ ನಾಯಕರಲ್ಲಿನ ಪ್ರೀತಿ, ವಿಶ್ವಾಸ ನಿಚ್ಚಳವಾಗಿ ವ್ಯಕ್ತವಾಗಿತ್ತು.