ವಾಷಿಂಗ್ಟನ್ : ಶ್ವೇತಭವನದಲ್ಲಿ ಭಾರತವು ತನ್ನ ನಿಜವಾದ ಮಿತ್ರನನ್ನು ಹೊಂದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳುವುದರೊಂದಿಗೆ ಅಮೆರಿಕ ಮತ್ತು ಭಾರತದ ನಡುವಿನ ಬಾಂಧವ್ಯ ಎಷ್ಟು ಉನ್ನತ ಮಟ್ಟದಲ್ಲಿದೆ ಎಂಬುದು ವಿಶ್ವಕ್ಕೇ ಸಾಬೀತಾದಂತಾಗಿದೆ.
ಅಧ್ಯಕ್ಷ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ದಿಗೆ ಹೆಚ್ಚಿನ ಒತ್ತು ನೀಡುವ ಬದ್ಧತೆಯನ್ನು ಪುನರುಚ್ಚರಿಸಿದಲ್ಲದೆ ಪಾಕ್ ನೆಲದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯನ್ನು ಮಟ್ಟ ಹಾಕುವ ಬಗ್ಗೆ ಕಠಿನವಾದ ಮಾತುಗಳನ್ನು ಆಡಿದರು. ಅಂತಾರಾಷ್ಟ್ರೀಯ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಸಹಕರಿಸುವಲ್ಲಿನ ತಮ್ಮ ಬದ್ಧತೆಯನ್ನು ಉಭಯ ನಾಯಕರು ಈ ಸಂದರ್ಭದಲ್ಲಿ ಘೋಷಿಸಿದರು.
ಪಾಕಿಸ್ಥಾನದಲ್ಲಿ ನೆಲೆ ಹೊಂದಿರುವ ಉಗ್ರ ಸಂಘಟನೆಗಳಾಗಿರುವ ಜೈಶ್ ಎ ಮೊಹಮ್ಮದ್, ಲಷ್ಕರ್ ಎ ತಯ್ಯಬ ಮತ್ತು ಡಿ-ಕಂಪೆನಿ (ದಾವೂದ್ ಇಬ್ರಾಹಿಂ) ವಿರುದ್ಧ ತಮ್ಮ ಹೋರಾಟವನ್ನು ಬಲಪಡಿಸುವ ಮತ್ತು ಪರಸ್ಪರ ಸಹಕರಿಸುವ ವಾಗ್ಧಾನವನ್ನು ಉಭಯ ರಾಷ್ಟ್ರಗಳ ನಾಯಕರು ಮಾಡಿದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಳಗಿನ ಮಾತುಕತೆಗಳ ಬಳಿಕ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ಭಾರತ ಮತ್ತು ಅಮೆರಿಕ, “26/1ರ ಮುಂಬಯಿ ದಾಳಿ, ಪಠಾಣ್ ಕೋಟ್ ದಾಳಿ, ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗಿಕೊಂಡಿರುವ ಉಗ್ರರ ವಿರುದ್ಧ ಈ ಪಾಕಿಸ್ಥಾನ ಈ ಕೂಡಲೇ ಕಠಿನ ಹಾಗೂ ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು’ ಎಂದು ಇಸ್ಲಾಮಾಬಾದನ್ನು ಆಗ್ರಹಿಸಿದವು.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರು ವ್ಯಾಪಕ ದ್ವಿಪಕ್ಷೀಯ ವಿಷಯಗಳ ಕುರಿತು ಮಾತುಕತೆ ನಡೆಸಿದರು. ಅವುಗಳಲ್ಲಿ ರಕ್ಷಣೆ, ಭದ್ರತೆ, ಅಫ್ಘಾನಿಸ್ಥಾನವೇ ಮುಂತಾಗಿ ಪ್ರಾದೇಶಿಕ ವಿಷಯಗಳ ಕುರಿತಾದ ಸಂಪರ್ಕ, ಸಂವಹನ, ಹಿಂದೂ ಮಹಾಸಾಗರ, ಪೂರ್ವ ಏಶ್ಯ ಮತ್ತು ಮಧ್ಯ ಪೂರ್ವ, ಎನ್‌ಎಸ್‌ಜಿ ಮತ್ತು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಕುರಿತ ವಿಚಾರಗಳು ಮುಖ್ಯವಾಗಿ ಚರ್ಚಿತವಾದವು; ಜತೆಗೆ ತೆರಿಗೆ, ನವೋನ್‌ಮೇಷತೆ, ಉದ್ಯಮಶೀಲತೆ ಮತ್ತು ವಿಶೇಷವಾಗಿ ಡಿಜಿಟಲ್ ಪಾಲುದಾರಿಕೆ ವಿಷಯಗಳು ಕೂಡ ಚರ್ಚಿತವಾದವು ಎಂದು ವಿದೇಶ ಕಾರ್ಯದರ್ಶಿ ಎಸ್ ಜೈಶಂಕರ್ ತಿಳಿಸಿದರು.