ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಚುನಾವಣಾ ಪ್ರಚಾರಾಭಿಯಾನದ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗಿರುವ ರಾಷ್ಟ್ರ ಬದ್ಧತೆಯನ್ನು ಸುತರಾಂ ಪ್ರಶ್ನಿಸಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ದಿಲ್ಲಿ ನಿವಾಸದಲ್ಲಿ ಆ ಸಂದರ್ಭದಲ್ಲಿ ನಡೆದಿದ್ದ ಭೋಜನ ಕೂಟದಲ್ಲಿ ಪಾಕ್ ಮಾಜಿ ರಾಯಭಾರಿಯೊಂದಿಗೆ ಸಿಂಗ್ ಮತ್ತು ಅನ್ಸಾರಿ ಕೂಡ ಪಾಲ್ಗೊಂಡಿದ್ದರು; ಇದರ ಅರ್ಥವೇನು ? ಎಂಬ ಪ್ರಶ್ನೆಯನ್ನು ಎತ್ತಿದ್ದ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೀಗ ವಿರೋಧ ಪಕ್ಷಗಳ ತೀವ್ರ ಆಕ್ರೋಶ, ಆಕ್ಷೇಪಗಳನ್ನು ಉಭಯ ಸದನಗಳಲ್ಲಿ ಎದುರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಜೇಟ್ಲಿ ಅವರಿಂದ ಈ ಸ್ಪಷ್ಟನೆಯ ಮಾತುಗಳು, ವಿವಾದವನ್ನು ಶಾಂತಗೊಳಿಸುವ ಪ್ರಯತ್ನವಾಗಿ ಬಂದಿವೆ.
ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಗುಜರಾತ್ ಮುಖ್ಯಮಂತ್ರಿಯಾಗಬೇಕೆಂಬ ಆಸಕ್ತಿಯನ್ನು ಪಾಕಿಸ್ಥಾನ ತೋರಿರುವುದು ಏನನ್ನು ಸೂಚಿಸುತ್ತದೆ ? ಎಂದೂ ಪ್ರಧಾನಿ ಮೋದಿ ಅವರು ತಮ್ಮ ಸಾರ್ವಜನಿಕ ಚುನಾವಣಾ ಭಾಷಣದಲ್ಲಿ ಪ್ರಶ್ನಿಸಿದ್ದರು.
ಈ ರೀತಿ ವಿರೋಧ ಪಕ್ಷ ನಾಯಕರ ದೇಶದ ಬಗೆಗಿನ ಬದ್ಧತೆಯನ್ನು ಪ್ರಶ್ನಿಸಿರುವ ಪ್ರಧಾನಿ ಮೋದಿ ಅವರು ಕ್ಷಮೆಯಾಚಿಸಬೇಕು ಇಲ್ಲವೇ ಸ್ಪಷ್ಟೀಕರಣ ನೀಡಬೇಕು ಎಂದು ರಾಜ್ಯಸಭೆಯಲ್ಲಿ ದಂಡಿ ಹಿಡಿದಿರುವ ಕಾಂಗ್ರೆಸ್ ಪಕ್ಷದ ಆಕ್ರೋಶದಿಂದಾಗಿ ಸಂಸತ್ ಕಲಾಪ ಪದೇ ಪದೇ ಮುಂದೂಡಿಕೆಯನ್ನು ಕಾಣುವಂತಾಗಿದೆ.