Advertisement
ಲೋಕಸಭೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ವಂದನಾ ನಿರ್ಣಯ ಭಾಷಣಕ್ಕೆ ಉತ್ತರ ನೀಡುತ್ತಾ ಮಾತನಾಡಿದ ಪ್ರಧಾನಿ ಮೋದಿ, ನೀವು (ಕಾಂಗ್ರೆಸ್) 50ವರ್ಷ ದೇಶವನ್ನಾಳಿದಿರಿ. ಈ ಸ್ಧಳ (ಲೋಕಸಭೆ) ದೇಶಕ್ಕಾಗಿ ಉಪಯೋಗವಾಗಬೇಕು. ಆದರೆ ನೀವು ಈ ಸ್ಥಳವನ್ನು ಪಕ್ಷದ ರಾಜಕೀಯಕ್ಕಾಗಿ ಬಳಸಿಕೊಂಡಿದ್ದೀರಿ. ನಾವು ಅದಕ್ಕಾಗಿ ನಿಮಗೆ ಉತ್ತರ ಕೊಡಲೇಬೇಕಾಗಿದೆ. ಇದು ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದ್ದಲ್ಲ. ಇದು ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ. ನೀವು ಎಷ್ಟೋ ಚುನಾವಣೆಗಳಲ್ಲಿ ಸೋತಿದ್ದೀರಿ, ಆದರೂ ನಿಮ್ಮ ಅಹಂಕಾರ ಹೋಗಿಲ್ಲ. ನಿಮ್ಮ ಪರಿಸರ ನಿಮ್ಮ ಅಹಂಕಾರವನ್ನು ಬಿಡುತ್ತಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
Related Articles
Advertisement
ತಮಿಳುನಾಡು, ತೆಲಂಗಾಣ, ಜಾರ್ಖಂಡ್, ಬಿಹಾರದಲ್ಲಿ ಕಾಂಗ್ರೆಸ್ ಅನ್ನು ಜನರು ಅಧಿಕಾರದಿಂದ ಕಿತ್ತೊಗೆದಿದ್ದಾರೆ. ಇನ್ನೆಂದೂ ನಿಮಗೆ ಅವರು ಮತ ಚಲಾಯಿಸುವುದಿಲ್ಲ. ನಾಗಾಲ್ಯಾಂಡ್ ನಲ್ಲಿ 24 ವರ್ಷಗಳ ಹಿಂದೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದೀರಿ, ಒಡಿಶಾದಲ್ಲಿ 27 ವರ್ಷದ ಹಿಂದೆ ಅಧಿಕಾರ ಹೋಯ್ತು, ಗೋವಾದಲ್ಲಿ 28 ವರ್ಷಗಳ ಹಿಂದೆ ಪೂರ್ಣ ಬಹುಮತ ಪಡೆದಿದ್ದೀರಿ. 1972ರಲ್ಲಿ ಪಶ್ಚಿಮಬಂಗಾಳದಲ್ಲಿ ಅಧಿಕಾರ ಪಡೆದಿದ್ದೀರಿ. ಪ್ರತ್ಯೇಕ ತೆಲಂಗಾಣ ರಚಿಸಿ ಅಧಿಕಾರ ಪಡೆಯಬೇಕೆಂದು ಯೋಚಿಸಿದ್ದೀರಿ, ಆದರೆ ಜನರು ನಿಮ್ಮನ್ನು ಒಪ್ಪಲಿಲ್ಲ ಎಂದು ಮೋದಿ ತಿರುಗೇಟು ನೀಡಿದರು.
ನಿಮ್ಮ ಈ ಎಲ್ಲಾ ನಡೆಗಳನ್ನು ಗಮನಿಸಿದರೆ ನೀವು(ಕಾಂಗ್ರೆಸ್) ಇನ್ನೂ 100 ವರ್ಷಗಳ ಕಾಲ ಅಧಿಕಾರಕ್ಕೆ ಬರಲೇ ಬಾರದೆಂದು ನಿರ್ಧರಿಸಿದಂತಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಂಗ್ಯವಾಡಿದರು.