ವಾಷಿಂಗ್ಟನ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಓರ್ವ ಅದ್ಭುತ ಮನುಷ್ಯ; ಆದರೆ ಅವರಿಂದ ಅಮೆರಿಕಕ್ಕೆ ಮಾತ್ರ ಏನೂ ಲಾಭವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಂಗ್ಯ ಮತ್ತು ಕೋಪದಿಂದ ಹೇಳಿದ್ದಾರೆ.
ಅಮೆರಿಕನ್ ವಸ್ತುಗಳ ಮೇಲಿನ ಆಮದು ಸುಂಕ ಕಡಿತನ ಕುರಿತಾಗಿ ಎರಡೇ ವಾರಗಳ ಅವಧಿಯಲ್ಲಿ ಟ್ರಂಪ್ ಭಾರತವನ್ನು ದೂರುತ್ತಿರುವುದು ಇದೀಗ ಎರಡನೇ ಬಾರಿ.
ಅಮೆರಿಕನ್ ಮೋಟರ್ ಸೈಕಲ್‌ಗಳು, ವಿಶೇಷವಾಗಿ ಹ್ಯಾರ್ಲೆ ಡೇವಿಡ್‌ಸನ್ ಬೈಕುಗಳ ಮೇಲಿನ ಭಾರತೀಯ ಆಮದು ಸುಂಕ ಅತೀ ಹೆಚ್ಚಿದೆ; ಇದನ್ನು ಕಡಿಮೆ ಮಾಡಬೇಕು ಎಂಬುದೇ ಟ್ರಂಪ್ ಅವರ ಒತ್ತಾಯವಾಗಿದೆ.
“ನಾನು ಪ್ರಧಾನಿ ಮೋದಿ ಅವರೊಂದಿಗೆ ಈ ವಿಷಯ ಮಾತನಾಡಿದಾಗ ಅವರು ಶೇ.50ರಷ್ಟು ಆಮದು ಸುಂಕ ತಗ್ಗಿಸಿರುವುದಾಗಿ ಹೇಳಿದರು. ಮೋದಿ ಹಾಗೆ ಮಾಡಿರುವ ಹೊರತಾಗಿಯೂ ಅಮೆರಿಕಕ್ಕೆ ಏನೂ ಸಿಗುತ್ತಿಲ್ಲ. ಆಮದು ಸುಂಕವನ್ನು ಶೇ.50ರಷ್ಟು ತಗ್ಗಿಸುವ ಮೂಲಕ ನಮಗೇನೋ ಭಾರೀ ಪ್ರಯೋಜನ ಮಾಡಿಕೊಟ್ಟಿದ್ದೇವೆ ಎಂಬ ಭಾವನೆ ಮೋದಿ ಅವರಲ್ಲಿದೆ; ಆದರೆ ಅದರಿಂದ ನಮಗೇನೂ ವಿಶೇಷವಾದ ಲಾಭವಾಗಿಲ್ಲ’ ಎಂದು ಟ್ರಂಪ್ ಅವರು ಶ್ವೇತಭವನದಲ್ಲಿ ಕರೆದಿದ್ದ ರಾಜ್ಯಪಾಲರುಗಳ ಸಭೆಯಲ್ಲಿ ಹೇಳಿದರು.
ಟ್ರಂಪ್ ಅವರು ಈ ಹಿಂದೆ ಅಮೆರಿಕನ್ ಮೋಟಾರ್ ಸೈಕಲ್ ಮೇಲಿನ ಭಾರತದ ಆಮದು ಸುಂಕ ಬಿಕ್ಕಟ್ಟನ್ನು ಬಗೆಹರಿಸಿದಿದ್ದರೆ ಅಮೆರಿಕವು ಕಣ್ಣಿಗೆ ಕಣ್ಣು ಎಂಬ ನೆಲೆಯಲ್ಲಿ ಗಂಭೀರ ಪ್ರತೀಕಾರದ ಕ್ರಮ ತಗೆದುಕೊಳ್ಳಲಿದೆ ಎಂದು ಹೇಳಿದ್ದರು.
ಆಮದು ಸುಂಕವನ್ನು ಶೇ.75ರಷ್ಟು ಕಡಿತ ಮಾಡುವುದಾಗಿ ಹೇಳಿದ್ದ ಭಾರತ ಕೊನೆಗೂ ಮಾಡಿದ್ದು ಶೇ.50ರಷ್ಟನ್ನು ಮಾತ್ರ ಎಂಬುದು ಟ್ರಂಪ್ ನಿರಾಶೆಗೆ ಕಾರಣವಾಗಿದೆ. ತಮಗಾದ ನಿರಾಶೆಯನ್ನು ಟ್ರಂಪ್ ಅವರು ಮೋದಿ ಅವರ ಎಂದಿನ “ನಮಸ್ತೇ’ ಮೂಲಕವೇ ಪ್ರಕಟಿಸಿರುವುದು ವಿಶೇಷವಾಗಿದೆ.