ಹೊಸದಿಲ್ಲಿ: ಸಂಸತ್‌ನ ಬಜೆಟ್ ಅಧಿವೇಶನಕ್ಕೆ ಶನಿವಾರ ವಿಧ್ಯುಕ್ತವಾಗಿ ತೆರೆ ಬೀಳಲಿದೆ. ಇದರ ಜತೆಗೆ 17ನೇ ಲೋಕಸಭೆಯ ಅಧಿವೇಶನದ ಕೊನೆಯ ಅಧಿವೇಶನವೂ ಇದಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಲೋಕಸಭೆ ಮತ್ತು ರಾಜ್ಯಸಭೆಯ ಬಿಜೆಪಿಯ ಎಲ್ಲಾ ಸಂಸದರು ತಪ್ಪದೇ ಕಲಾಪದಲ್ಲಿ ಹಾಜರಿರಬೇಕು ಎಂದು ಒಂದು ಸಾಲಿನ ವಿಪ್ ಅನ್ನು ಹೊರಡಿಸಲಾಗಿದೆ. ಈ ಬಗ್ಗೆ ಲೋಕಸಭೆಯ ಸದಸ್ಯರು, ಕೇಂದ್ರ ಸಚಿವರು ಯಾರಿಗೆ ಕೂಡ ಹೆಚ್ಚಿನ ಮಾಹಿತಿ ತಿಳಿದಿಲ್ಲ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಕೊನೆಯ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ಗೊತ್ತುವಳಿ ಸಲ್ಲಿಸುವುದರ ಜತೆಗೆ ಅಯೋಧ್ಯೆಯಲ್ಲಿ ಯಶಸ್ವಿಯಾಗಿ ರಾಮ ಮಂದಿರ ನಿರ್ಮಾಣ, ಕಳೆದ ತಿಂಗಳ 22ರಂದು ಪ್ರಧಾನಿ ನರೇಂದ್ರ ಮೋದಿಯವರು ಯಶಸ್ವಿಯಾಗಿ ಉದ್ಘಾಟನೆ ಮಾಡಿದ್ದ ಕಾರ್ಯಕ್ರಮದ ಬಗ್ಗೆಯೂ ಲೋಕಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳು ಇವೆ. ಅದರಲ್ಲಿ “ಶ್ರೀರಾಮ ಭಾರತ ಮತ್ತು ಭಾರತೀಯತೆಯ ಪ್ರತೀಕ’, “ಶ್ರೀರಾಮ ಭಾರತೀಯ ಸಂಸ್ಕೃತಿಯ ಪ್ರತೀಕ, “ಶ್ರೀರಾಮ ಒಂದು ಭಾರತ, ಶ್ರೇಷ್ಠ ಭಾರತದ ಪ್ರತೀಕ’ ಎಂದು ನಿರ್ಣಯ ಮಂಡಿಸಿ ಅಂಗೀಕರಿಸಲು ಈಗಾ ಗಲೇ ತೀರ್ಮಾನಿಸಲಾಗಿದೆ ಮೂಲಗಳು ಹೇಳಿವೆ. ಹೀಗಾಗಿಯೇ ಕೊನೆಯ ಅಧಿವೇಶನದಲ್ಲಿ ಮಹತ್ವದ ನಿರ್ಣಯವನ್ನೂ ಕೈಗೊಳ್ಳುವ ಸಾಧ್ಯತೆಗಳಿವೆ.
ಹಲವರಿಗೆ ಸನ್ಮಾನ?: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಅದಕ್ಕೆ ಕಾರಣಕರ್ತ ರಾದವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುವ ಸಾಧ್ಯತೆಗಳು ಇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಕಾರ್ಯಕ್ರಮ ಬಿಜೆಪಿಗೆ ಧನಾತ್ಮಕವಾಗಿ ಬದಲಾವಣೆಯಾಗಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.
ಫೆ.1ರಂದು ಮಂಡಿಸಲಾಗಿದ್ದ ಮಧ್ಯಂತರ ಬಜೆಟ್‌ನಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಮಂಡಿಸುವ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು. ಆದರೆ, ಗುರುವಾರವೇ ಅರ್ಥ ವ್ಯವಸ್ಥೆಯ ಬಗ್ಗೆ ಶ್ವೇತಪತ್ರ ಮಂಡಿಸಿದ್ದರಿಂದ ಶನಿವಾರ ಅಧಿವೇಶನದಲ್ಲಿ ಏನಿರಲಿದೆ ಎಂಬ ಕುತೂಹಲ ಉಂಟಾಗಿದೆ.
ಜ.31ರಂದು ಸಂಸತ್‌ನ ಬಜೆಟ್ ಅಧಿವೇಶನದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪತ್ರಕರ್ತರ ಜತೆಗೆ ಮಾತನಾಡಿದ್ದ ಸಂದರ್ಭದಲ್ಲಿ ಎಲ್ಲರ ಜತೆಗೆ “ರಾಮ್ ರಾಮ್’ ಎಂದು ಹೇಳುವ ಮೂಲಕ ಮಾತು ಆರಂಭಿಸಿದ್ದರು.
2 ದಿನಗಳ ಹಿಂದೆ ಅರ್ಥ ವ್ಯವಸ್ಥೆಯ ವಿರುದ್ಧ ಶ್ವೇತಪತ್ರ ಹೊರಡಿಸುವುದಕ್ಕೆ ಎಂಬ ಕಾರಣದಿಂದ ಸಂಸತ್ ಅಧಿವೇಶನವನ್ನು ಶನಿವಾರದ ವರೆಗೆ ವಿಸ್ತರಿಸಲಾಗಿತ್ತು. ಆದರೆ, ಗುರುವಾರವೇ ಶ್ವೇತಪತ್ರ ಮಂಡನೆಯಾಗಿರುವುದರಿಂದ ಶನಿವಾರದ ಕಲಾಪದಲ್ಲಿ ಏನು ಇರಲಿದೆ ಎಂಬ ಕುತೂಹಲ ಆಡಳಿತ ಮತ್ತು ಪ್ರತಿಪಕ್ಷಗಳ ಸಂಸದರನ್ನು ಕಾಡುತ್ತಿದೆ. ಶನಿವಾರದ ಸಂಸತ್‌ನ ಕಾರ್ಯಕಲಾಪ ಏನಿರಲಿದೆ ಎಂಬುದರ ಬಗ್ಗೆ ಹೊಸದಿಲ್ಲಿಯ ರಾಜಕೀಯ ಪಡಸಾಲೆಯಲ್ಲಿ ಈಗ ಬಿರುಸಿನ ಚರ್ಚೆಗಳು ನಡೆದಿವೆ.