Advertisement

ತ್ರಿವಳಿ ತಲಾಖ್‌ ವಿರುದ್ಧ ಮತ್ತೆ ಪಿಎಂ ಮೋದಿ ಧ್ವನಿ

11:34 AM Apr 30, 2017 | |

ಹೊಸದಿಲ್ಲಿ: ಇಸ್ಲಾಂ ಧರ್ಮದಲ್ಲಿರುವ ತ್ರಿವಳಿ ತಲಾಖ್‌ ಆಚರಣೆಯನ್ನು ಕೈಬಿಡಬೇಕು ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೂಮ್ಮೆ ತ್ರಿವಳಿ ತಲಾಖ್‌ ವಿಚಾರ ಪ್ರಸ್ತಾವಿಸಿದ್ದಾರೆ.
 
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಶನಿವಾರ ನಡೆದ ಬಸವ ಜಯಂತಿ ವೇಳೆ ಮಾತನಾಡಿದ ಅವರು, ತ್ರಿವಳಿ ತಲಾಖ್‌ ವಿಚಾರದಲ್ಲಿ ಮುಸ್ಲಿಂ ಸಮುದಾಯ ರಾಜಕಾರಣ ನೋಡದಂತೆ ಮನವಿ ಮಾಡಿದ್ದಾರೆ. 12ನೇ ಶತಮಾನ ದಲ್ಲಿ ಬಸವಣ್ಣನವರು ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದರು. ಅಂತೆಯೇ, ಈಗ ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳು ತ್ರಿವಳಿ ತಲಾಖ್‌ನಂಥ ಪದ್ಧತಿ ಕೊನೆಗಾಣಿಸಲು ಹೋರಾಡಬೇಕು ಎಂದು ಹೇಳಿದ್ದಾರೆ.

Advertisement

“”ಯಾವುದೇ ಕಾರಣಕ್ಕೂ ತ್ರಿವಳಿ ತಲಾಖ್‌ ವಿಚಾರವನ್ನು ರಾಜಕೀಯ ದೃಷ್ಟಿಯಿಂದ ನೋಡಬೇಡಿ. ಇದರಿಂದ ಹೊರಬಂದು, ಪರಿಹಾರ ಕಂಡುಕೊಳ್ಳಿ. ಈ ಪರಿಹಾರ ಅದರದ್ದೇ ಆದ ಶ್ರೇಷ್ಠತೆ ಹೊಂದಿರುವುದಲ್ಲದೇ ಮುಂದಿನ ತಲೆಮಾರು ನಿಮ್ಮನ್ನು ನೆನಪಿಸಿಕೊಳ್ಳುತ್ತದೆ,” ಎಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “”ಇಸ್ಲಾಂ ಧರ್ಮದ “ಬಲಾಡ್ಯ ಜನರು’ ಈ ಸಾಮಾಜಿಕ ಅನಿಷ್ಟವನ್ನು ಹೋಗಲಾಡಿಸಲು ಮುಂದೆ ಬರುತ್ತಾರೆ ಎಂಬ ಭರವಸೆ ಇದೆ. ಆಧುನಿಕ ಕಾಲದಲ್ಲಿ ಈ ವ್ಯವಸ್ಥೆ ಅಪ್ರಸ್ತುತ ಎಂಬುದನ್ನು ಅವರು ಮನಗಾಣಲಿದ್ದಾರೆ” ಎಂದರು.

ಭಾರತದ ಮುಸಲ್ಮಾನರು ಈ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡಲ್ಲಿ ಅವರು, ಇಡೀ ದೇಶಕ್ಕೆ ಅಥವಾ ಧರ್ಮಕ್ಕೆ ಮಾದರಿಯಾಗುವುದಷ್ಟೇ ಅಲ್ಲ, ಇಡೀ ಜಗತ್ತಿಗೇ ಅವರು ದಾರಿದೀಪವಾಗುತ್ತಾರೆ. ಇಂಥ ಶಕ್ತಿಯನ್ನು ಈ ಮಣ್ಣಿನ ನೆಲ ಅವರಿಗೆ ಕೊಟ್ಟಿದೆ ಎಂದು ಅವರು ಆಶಿಸಿದರು. 

ವಿಧವೆಯರ ಬಗ್ಗೆಯೂ ಮಾತನಾಡಿ: ತ್ರಿವಳಿ ತಲಾಖ್‌ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರಿಗೆ ಟಾಂಗ್‌ ನೀಡಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌, ಗೋರಕ್ಷಕರಿಂದ ಹತ್ಯೆಗೀಡಾದ ಮುಸ್ಲಿಮರ ಪತ್ನಿ ಅಥವಾ ಮಕ್ಕಳ ಬಗ್ಗೆಯೂ ಪ್ರಧಾನಿ ಮಾತನಾಡಲಿ ಎಂದು ಹೇಳಿದ್ದಾರೆ. ಕೇವಲ ತ್ರಿವಳಿ ತಲಾಖ್‌ ಬಗ್ಗೆ ಮಾತನಾಡಿದರೆ ಸಾಲದು. ಇಸ್ಲಾಂ ಧರ್ಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಇತರೆ ಸಮಸ್ಯೆಗಳ ಬಗ್ಗೆಯೂ ಅವರು ಧ್ವನಿಯೆತ್ತಬೇಕು ಎಂದು ಅವರು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ ನಾಯಕ ಖರ್ಗೆ ಆಕ್ಷೇಪ
ಪ್ರಧಾನಿ ಮೋದಿ ಅವರ ತ್ರಿವಳಿ ತಲಾಖ್‌ ಪಿಡುಗು ಹೋಗಲಾಡಿಸುವ ಮಾತಿಗೆ ಕಾಂಗ್ರೆಸ್‌ ಆಕ್ಷೇಪವೆತ್ತಿದೆ. ಪ್ರಧಾನಿ ಮಾತನ್ನು ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇದ್ದು, ಇದರಲ್ಲಿ ಲಾಭ ಮಾಡಿಕೊಳ್ಳುವ ದೃಷ್ಟಿಯಿಂದ ಈ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈಗಷ್ಟೇ ಅಲ್ಲ, ಮುಂದೆಯೂ ಈ ಬಗ್ಗೆ ಪ್ರಸ್ತಾವಿಸುತ್ತಾರೆ. ಆದರೆ ಅವರು ಆರ್‌ಎಸ್‌ಎಸ್‌ ಸಿದ್ಧಾಂತದಿಂದ ಬಂದವರಾಗಿರುವುದರಿಂದ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದಿದ್ದಾರೆ.

Advertisement

ಉತ್ತರ ಪ್ರದೇಶ ಸಚಿವರ ವಿವಾದ
ತ್ರಿವಳಿ ತಲಾಖ್‌ ರದ್ದತಿ ಬಗ್ಗೆ ಚರ್ಚೆಗಳು ನಡೆಯುವ ವೇಳೆಯಲ್ಲೇ ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಸರಕಾರದ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಗಂಡಸರು ಕಾಮತೃಷೆ ತೀರಿಸಿಕೊಳ್ಳುವ ಸಲುವಾಗಿ ಪತ್ನಿಯರಿಗೆ ತಲಾಖ್‌ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕ್ಯಾಬಿನೆಟ್‌ ದರ್ಜೆಯ ಸಚಿವರಾದ ಸ್ವಾಮಿ ಪ್ರಸಾದ್‌ ಮೌರ್ಯ ಅವರು ಈ ಹೇಳಿಕೆ ನೀಡಿದ್ದು, ಇದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next