ವಾಷಿಂಗ್ಟನ್: ಈ ತಿಂಗಳು ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅಮೆರಿಕದ ಜಂಟಿ ಸಂಸತ್ ಉದ್ದೇಶಿಸಿ ಭಾಷಣ ಮಾಡುವಂತೆ ಅಮೆರಿಕ ಸಂಸತ್‌ನ ಸ್ಪೀಕರ್ ಕೆವಿನ್ ಮೆಕಾರ್ಥಿ ಅವರು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಈ ವಿಚಾರವನ್ನು ಭಾರತೀಯ ಅಮೆರಿಕನ್ ಸಂಸದ ರೋ ಖನ್ನಾ ಸ್ವಾಗತಿಸಿದ್ದಾರೆ. 2016ರ ಜೂ.8ರಂದು ಅಮೆರಿಕದ ಜಂಟಿ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ್ದರು. ಅಮೆರಿಕದ ಜಂಟಿ ಸಂಸತ್ ಉದ್ದೇಶಿಸಿ ಭಾಷಣ ಮಾಡಲು ಎರಡು ಅಥವಾ ಮೂರು ಬಾರಿ ಅಮೆರಿಕ ಆಹ್ವಾನಿಸಿರುವ ಕೆಲವೇ ಮಂದಿ ವಿಶ್ವ ನಾಯಕರಲ್ಲಿ ಮೋದಿ ಕೂಡ ಒಬ್ಬರು. ಅಮೆರಿಕದ ಜಂಟಿ ಸಂಸತ್ ಉದ್ದೇಶಿಸಿ ವಿನ್‌ಸ್ಟನ್ ಚರ್ಚಿಲ್ ಮತ್ತು ಬೆಂಜಮಿನ್ ನೆತನ್ಯಾಹು ತಲಾ ಮೂರು ಬಾರಿ, ನೆಲ್ಸನ್ ಮಂಡೇಲ ಮತ್ತು ಯಿಟಾಕ್ ರಾಬಿನ್ ತಲಾ ಎರಡು ಬಾರಿ ಭಾಷಣ ಮಾಡಿದ್ದಾರೆ.
ಭಾರತ-ಅಮೆರಿಕ ಬಾಂಧವ್ಯಕ್ಕೆ ಬೆಂಬಲ
ಹೊಸದಿಲ್ಲಿ: ಭಾರತ ಮತ್ತು ಅಮೆರಿಕದ ಬಾಂಧವ್ಯದ ತಳಹದಿಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದರ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಫಲಪ್ರದ ಮಾತುಕತೆಯನ್ನೂ ಬೈಡೆನ್ ಸರಕಾರದ ಅಧಿಕಾರಿಗಳೊಂದಿಗೆ ನಡೆಸಿದ್ದಾರೆಂದು ಕಾಂಗ್ರೆಸ್‌ನ ಡೇಟಾ ಅನಾಲಿಟಿಕ್ಸ್ ಡಿಪಾರ್ಟ್‌ಮೆಂಟ್ ಅಧ್ಯಕ್ಷರಾದ ಪ್ರವೀಣ್ ಚಕ್ರವರ್ತಿ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ರಾಹುಲ್, ಶ್ವೇತಭವನದ ಅಧಿಕಾರಿಗಳು, ಬೈಡೆನ್ ಆಡಳಿತದ ಅಧಿಕಾರಿಗಳು, ಚಿಂತಕರು, ವಿಶ್ವವಿದ್ಯಾನಿಲಯಗಳು, ವಿದ್ಯಾರ್ಥಿಗಳು, ಮಾಧ್ಯಮಗಳು ಹಾಗೂ ಭಾರತೀಯ ಮೂಲದ ಅಮೆರಿಕನ್ನರ ಜತೆ ಮಾತುಕತೆ ನಡೆಸಿದ್ದಾರೆ.