ಹೊಸದಿಲ್ಲಿ : ‘ಐತಿಹಾಸಿಕ ವ್ಯಕ್ತಿಗಳ ಪ್ರತಿಮೆ ಭಂಜನೆ ದುಷ್ಕೃತ್ಯ ಎಷ್ಟು ಮಾತ್ರಕ್ಕೂ ಸಹಿಸಲಾಗದು; ಅದು ಅತ್ಯಂತ ಖಂಡನೀಯ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಹೊರತಾಗಿಯೂ ದೇಶದಲ್ಲಿ ಪ್ರತಿಮೆ ಭಂಜನೆ ಕೃತ್ಯ ಇನ್ನೂ ಮುಂದುವರಿದಿದೆ.
ತಾಜಾ ಪ್ರಕರಣವಾಗಿ ಕೇರಳ ಕಣ್ಣೂರು ಜಿಲ್ಲೆಯ ತಾಳಿಪರಂಬ ದಲ್ಲಿ ತಾಲೂಕು ಕಚೇರಿಯ ಮುಂದಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ದುರುಳರು ಇಂದು ಗುರುವಾರ ಬೆಳಗ್ಗೆ 7 ಗಂಟೆಯ ಹೊತ್ತಿಗೆ ಹಾನಿ ಮಾಡಿರುವುದಾಗಿ ಮಾತೃಭೂಮಿ ತಿಳಿಸಿದೆ.
ದುಷ್ಕರ್ಮಿಗಳು ಗಾಂಧಿ ಪ್ರತಿಮೆಯ ಕನ್ನಡಕವನ್ನು ಮುರಿದಿದ್ದಾರೆ; ಹೂಮಾಲೆಯನ್ನು ನಾಶ ಮಾಡಿದ್ದಾರೆ ಮತ್ತು ಪ್ರತಿಮೆಗೆ ಕಲ್ಲೆಸೆದು ಹಾನಿ ಉಂಟುಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪೊಲೀಸರು ಈ ಘಟನೆಯ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಳೆದ ಭಾನುವಾರ ತ್ರಿಪುರದಲ್ಲಿ ಲೆನಿನ್ ಪ್ರತಿಮೆಯನ್ನು ಅನಂತರದಲ್ಲಿ ಪೆರಿಯಾರ್ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೈದಿದ್ದರು. ಇದಕ್ಕೆ ಪ್ರತೀಕಾರವಾಗಿ ನಿನ್ನೆ ಭಾರತೀಯ ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪ್ರತಿಮೆಗೆ ದುಷ್ಕರ್ಮಿಗಳು ಹಾನಿ ಮಾಡಿದ್ದರು.
ಪ್ರತಿಮೆ ಭಂಜನ ಕೃತ್ಯವನ್ನು ಕಟುವಾದ ಶಬ್ದಗಳಲ್ಲಿ ಖಂಡಿಸಿದ್ದ ಪ್ರಧಾನಿ ಮೋದಿ ಅವರು ಈ ರೀತಿಯ ದುಷ್ಕೃತ್ಯಗಳಲ್ಲಿ ತೊಡಗಿಕೊಂಡವರನ್ನು ಕಾನೂನು ಪ್ರಕಾರ ಶಿಕ್ಷಿಸಬೇಕೆಂದು ಹೇಳಿದ್ದರಲ್ಲದೆ ಈ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಾತನಾಡಿದ್ದರು.