ಟೋಕಿಯೋ: ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಕ್ವಾಡ್ ಶೃಂಗದಲ್ಲಿ ಭಾಗವಹಿಸಲು ಎರಡು ದಿನಗಳ ಜಪಾನ್ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಮೇ 23) ಟೋಕಿಯೋಗೆ ಆಗಮಿಸಿದ್ದು, ಟೋಕಿಯೋ ಹೋಟೆಲ್ ನಲ್ಲಿ ಭಾರತೀಯ ಸಮುದಾಯ ಹಾಗೂ ಜಪಾನ್ ನಾಗರಿಕರು ಹೂಗುಚ್ಛ ನೀಡಿ ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಂಟಿಯಾಗುತ್ತಿದ್ದಾರೆಯೇ? ಹೈಕಮಾಂಡ್ ನೀಡಿದ ಸಂದೇಶವೇನು?
ಟೋಕಿಯೋ ಹೋಟೆಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸಮುದಾಯದ ಮಕ್ಕಳ ಜತೆ ಸಂವಾದ ನಡೆಸಿದರು. ಟೋಕಿಯೋ ಹೋಟೆಲ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ ವೇಳೆ ಭಾರತೀಯ ಸಮುದಾಯದ ಮಕ್ಕಳ ಜತೆ ಜಪಾನ್ ನ ಮಕ್ಕಳು ಆಟೋಗ್ರಾಫ್ ಪಡೆಯಲು ನಿಂತಿದ್ದರು. ಆಗ ಜಪಾನ್ ನ ಪುಟಾಣಿ ಹಿಂದಿಯಲ್ಲಿ ಮಾತನಾಡಿದ್ದನ್ನು ಗಮನಿಸಿದ ಪ್ರಧಾನಿ ಮೋದಿ, ವಾಹ್…ನೀನು ಹಿಂದಿ ಭಾಷೆಯನ್ನು ಎಲ್ಲಿ ಕಲಿತೆ ಎಂದು ವಿಚಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಪ್ರಧಾನಿ ಮೋದಿ ಟೋಕಿಯೋ ಹೋಟೆಲ್ ಗೆ ಆಗಮಿಸುತ್ತಿದ್ದಂತೆಯೇ ಭಾರತೀಯ ಸಮುದಾಯ, ಭಾರತದ ಸಿಂಹ ಎಂಬ ಘೋಷಣೆಯೊಂದಿಗೆ ಸ್ವಾಗತಿಸಿರುವುದಾಗಿ ವರದಿ ತಿಳಿಸಿದೆ.
ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯಲಿರುವ ಕ್ವಾಡ್ ಶೃಂಗದಲ್ಲಿಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಲ್ವರು ನಾಯಕರು ಚರ್ಚೆ ನಡೆಸಲಿದ್ದಾರೆ. ಕ್ವಾಡ್ ಜನ್ಮತಾಳಿದ ನಂತರ ಈವರೆಗೆ ಮುಖಾಮುಖಿಯಾಗಿ ಸಭೆ ನಡೆದಿರುವುದು ಕೇವಲ ಒಂದು ಬಾರಿ ಮಾತ್ರ. ಇದಕ್ಕೆ ಅಮೆರಿಕ ಆತಿಥ್ಯ ವಹಿಸಿತ್ತು. ಈ ಬಾರಿ ಜಪಾನ್ ಆತಿಥ್ಯ ವಹಿಸಿದೆ.
ಕ್ವಾಡ್ ಶೃಂಗದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿರಾ ಮತ್ತು ಆಸ್ಟ್ರೇಲಿಯಾದ ನಿಯೋಜಿತ ಪ್ರಧಾನಿ ಆ್ಯಂಟನಿ ಆಲ್ಬನೀಸ್ ಅವರು ಭಾಗಿಯಾಗಲಿದ್ದಾರೆ.