ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಲಾಂಛನ, ಥೀಮ್ ಮತ್ತು ವೆಬ್‌ಸೈಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅನಾವರಣಗೊಳಿಸಿದರು.
ಲಾಂಛನದಲ್ಲಿ ಕಮಲದ ಹೂವು ಇದ್ದು, “ವಸುದೈವ ಕಟುಂಬಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ವಾಕ್ಯ ಸಂದೇಶವಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, “ಕೊರೊನಾ ಸಾಂಕ್ರಾಮಿಕ, ಸಂಘರ್ಷಗಳು ಮತ್ತು ಆರ್ಥಿಕ ಅನಿಶ್ಚಿತತೆಯ ನಂತರದ ಪರಿಣಾಮಗಳನ್ನು ಜಗತ್ತು ಪ್ರಸ್ತುತ ಎದುರಿಸುತ್ತಿದೆ.
ಈ ಸಮಯದಲ್ಲಿ ಜಿ20 ಲಾಂಭನದಲ್ಲಿರುವ ಕಮಲವು ಭರವಸೆಯ ಸಂಕೇತವಾಗಿದೆ. ಕಮಲವು ಪೌರಾಣಿಕ ಪರಂಪರೆ, ನಮ್ಮ ಆಸ್ಥೆ ಮತ್ತು ಬೌದ್ಧಿಕತೆಯ ಪ್ರತಿಬಿಂಬಿವಾಗಿದೆ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಕಮಲ ಅರಳುತ್ತಲೇ ಇರುತ್ತದೆ,’ ಎಂದರು.
ಜತೆಗೆ, ಭಾರತವನ್ನು ಪ್ರಜಾಸತ್ತೆಯ ತಾಯಿ ಎಂದೂ ಮೋದಿ ಬಣ್ಣಿಸಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ವರ್ಷಪೂರ್ತಿ ಜಿ20 ಶೃಂಗಸಭೆಗಳು ನಡೆಯುತ್ತದೆ. 2023ರ ಸೆ.9 ಮತ್ತು 10ರಂದು ನವದೆಹಲಿಯಲ್ಲಿ ಜಿ20 ನಾಯಕರ ಸಮ್ಮೇಳನ ನಡೆಯಲಿದೆ.
ಈ ಲೋಗೋ ಕೇವಲ ಸಂಕೇತವಲ್ಲ. ಇದೊಂದು ಸಂದೇಶ ಮತ್ತು ಸಂಕಲ್ಪ. ನಮ್ಮ ನರನಾಡಿಗಳಲ್ಲಿ ಪ್ರವಹಿಸುತ್ತಿರುವ ಭಾವನೆ. ಇದು ನಮ್ಮ ಆಲೋಚನೆಗಳಲ್ಲಿ ಸೇರಿಕೊಂಡಿರುವ ಸಂಕಲ್ಪವಾಗಿದೆ.
– ನರೇಂದ್ರ ಮೋದಿ, ಪ್ರಧಾನಿ