ನವದೆಹಲಿ: ದೇಶದ ಮೊಟ್ಟ ಮೊದಲ ಚಾಲಕ ರಹಿತ ದೆಹಲಿ ಮೆಟ್ರೋ ರೈಲು(ಜನಕಪುರಿ ಪಶ್ಚಿಮ ಟು ಬೊಟಾನಿಕಲ್ ಗಾರ್ಡನ್) ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ(ಡಿಸೆಂಬರ್ 28, 2020) ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ.
ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಲೈನ್ ನಲ್ಲಿ ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಸರ್ವೀಸ್ ಅನ್ನು ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆಗೊಳಿಸಿದರು.
ಈ ರೈಲು ಚಾಲಕ ರಹಿತವಾಗಿದ್ದು ಸ್ವಯಂ ಚಾಲಿತವಾಗಿದೆ. ಈ ರೈಲು 37 ಕಿ.ಮೀ ಉದ್ದದ ಮೆಜೆಂಟಾ ಲೈನ್ ಅನ್ನು ಒಳಗೊಂಡಿದ್ದು, ದೇಶದ ಮೊದಲ ಸ್ವಯಂ ಚಾಲಿತ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಈ ರೈಲಿನಲ್ಲಿ ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಅಳಡಿಸಲಾಗಿದ್ದು, ಚಾಲಕ ಸಹಿತ ರೈಲುಗಳಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಬಹುದಾಗಿದೆ. ಏಸಿ ಮೂಲಕ ಕೋವಿಡ್ ಹರಡುತ್ತದೆ ಎಂಬ ಆತಂಕವನ್ನು ದೂರ ಮಾಡಲು ಈ ರೈಲಿನಲ್ಲಿ ಕಾಂಟ್ಯಾಕ್ಟ್ ಲೆಸ್ ಸೇವೆಗಳನ್ನು ಅಳವಡಿಸಲಾಗಿದೆ ಎಂದಿದೆ.
ಇದನ್ನೂ ಓದಿ:ಶಾಲಾರಂಭ ಮತ್ತು ಕೊರೋನಾ ರೂಪಾಂತರಿ! ಏನೆನ್ನುತ್ತಾರೆ ವೈದ್ಯರು?
ದೆಹಲಿ ಮೆಟ್ರೋ ಭಾರತದ ಅತಿ ದೊಡ್ಡ ಮೆಟ್ರೋ ಸೇವೆ ಆಗಿದ್ದು, ಕೋಲ್ಕತಾ ಮೆಟ್ರೋನ ನಂತರ ದೇಶದ ಅತ್ಯಂತ ಹಳೆಯ ಮೆಟ್ರೋ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ದೆಹಲಿ ಮೆಟ್ರೋ ಚಾಲಕ ರಹಿತ ರೈಲುಗಳು ಡಿ ಎಮ್ ಆರ್ ಸಿ ಯ ಮೂರನೇ ಹಂತದ ಭಾಗವಾಗಿ ತಯಾರಿಸಲಾದ ಮೆಜೆಂಟಾ ಲೈನ್ ಹಾಗೂ ಪಿಂಕ್ ಲೈನ್ ಗಳಲ್ಲಿ ಕಾರ್ಯನಿರ್ವಹಿಸಲಿವೆ.