ಹೊಸದಿಲ್ಲಿ: ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತ ಮಂಡಳಿ (ಯುಎನ್‌ಎಸ್‌ಸಿ)ಯ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ವಹಿಸಲಿದ್ದಾರೆ.
ಯುಎನ್‌ಎಸ್‌ಸಿ ಸಭೆಯ ಹಾಲಿ ತಿಂಗಳ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಆಗಸ್ಟ್ 9ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ವಿಶ್ವಸಂಸ್ಥೆಯಲ್ಲಿ ದೀರ್ಘ ಕಾಲ ದಿಂದಲೂ ಭಾರತವು ಭದ್ರತ ಮಂಡಳಿ ಸುಧಾರಣೆ ಹಾಗೂ ಭಾರತಕ್ಕೆ ಖಾಯಂ ಸದಸ್ಯತ್ವದ ಬೇಡಿಕೆಯಿಡುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಆ.9ರ ಸಭೆ ಮಹತ್ವ ಪಡೆದಿದೆ.
ವಿಶ್ವಸಂಸ್ಥೆಯಲ್ಲಿನ ಭಾರತದ ಮಾಜಿ ರಾಯಭಾರಿ ಸೈಯದ್ ಅಕºರುದ್ದೀನ್ ಅವರು ರವಿವಾರ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 15 ಸದಸ್ಯರಾಷ್ಟ್ರಗಳನ್ನು ಹೊಂದಿರುವ ಯುಎನ್‌ಎಸ್‌ಸಿಯ ಅಧ್ಯಕ್ಷ ಸ್ಥಾನವನ್ನು ಭಾರತೀಯ ರಾಜಕೀಯ ನಾಯಕತ್ವವು ವಹಿಸಿಕೊಳ್ಳುತ್ತಿರುವುದು 75 ವರ್ಷಗಳಲ್ಲಿ ಇದೇ ಮೊದಲು ಎಂದೂ ಅವರು ತಿಳಿಸಿದ್ದಾರೆ.
3 ಪ್ರಮುಖ ವಿಚಾರಗಳ ಚರ್ಚೆ: ಸರದಿಯಂತೆ ಯುಎನ್‌ಎಸ್‌ಸಿ ಅಧ್ಯಕ್ಷತೆಯ ಅವಕಾಶವು ಪ್ರತೀ ಸದಸ್ಯ ರಾಷ್ಟ್ರಕ್ಕೂ ಬರುತ್ತದೆ. ಅದೇ ರೀತಿ, ಈ ತಿಂಗಳ ಅಧ್ಯಕ್ಷತೆಯ ಅವಕಾಶ ಭಾರತಕ್ಕೆ ಸಿಕ್ಕಿದೆ. ಈ ಅವಧಿಯಲ್ಲಿ ದೇಶವು ನೌಕಾ ಭದ್ರತೆ, ಶಾಂತಿಪಾಲನೆ, ಉಗ್ರ ನಿಗ್ರಹಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ. ಜತೆಗೆ, ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್.ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಸೇರಿದಂತೆ ಉನ್ನತ ಅಧಿಕಾರಿಗಳು ಹಲವು ಉನ್ನತಮಟ್ಟದ ಸಭೆಗಳ ನೇತೃತ್ವ ವಹಿಸಲಿದ್ದಾರೆ.
ಭದ್ರತ ಮಂಡಳಿಯ ಖಾಯಂಯೇತರ ಸದಸ್ಯ ರಾಷ್ಟ್ರವಾಗಿ ಭಾರತದ 2 ವರ್ಷಗಳ ಅವಧಿ ಜ. 1ರಿಂದ ಆರಂಭವಾಗಿದೆ. ಒಟ್ಟು 7 ಬಾರಿ ಭಾರತವು ಮಂಡಳಿಯ ಖಾಯಂ ಅಲ್ಲದ ಸದಸ್ಯ ಸ್ಥಾನ ಪಡೆದಿದೆ.
10ನೇ ಬಾರಿ ಭಾರತಕ್ಕೆ ಮನ್ನಣೆ :
ಯುಎನ್‌ಎಸ್‌ಸಿ ಅಧ್ಯಕ್ಷತೆ ವಹಿಸಲು ಭಾರತಕ್ಕೆ ಅವಕಾಶ ಸಿಗುತ್ತಿರುವುದು ಇದು 10ನೇ ಬಾರಿ. ಈ ಹಿಂದೆ ಜೂನ್ 1950, ಸೆಪ್ಟಂಬರ್ 1967, ಡಿಸೆಂಬರ್ 1972, ಅಕ್ಟೋಬರ್ 1977, ಫೆಬ್ರವರಿ 1985, ಅಕ್ಟೋಬರ್ 1991, ಡಿಸೆಂಬರ್ 1992, ಆಗಸ್ಟ್ 2011 ಮತ್ತು ನವೆಂಬರ್ 2012ರಲ್ಲಿ ಭಾರತವು ಯುಎನ್‌ಎಸ್‌ಸಿ ಅಧ್ಯಕ್ಷತೆ ವಹಿಸಿತ್ತು.
ಇದೊಂದು ಐತಿಹಾಸಿಕ ಕ್ಷಣ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಅವಧಿಯು ಸಮ್ಮಾನ, ಸಂವಾದ, ಸಹಯೋಗ, ಶಾಂತಿ, ಸಮೃದ್ಧಿ ಯನ್ನು ಒಳಗೊಂಡಿರುತ್ತದೆ.
ಅರಿಂದಮ್ ಬಾಗ್ಚಿ, ವಿದೇಶಾಂಗ ಇಲಾಖೆ ವಕ್ತಾರ