ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಈ ತಿಂಗಳು ರಾಜ್ಯದಲ್ಲಿ ಎರಡು ಮಹತ್ವದ ರೋಡ್ ಶೋ ನಡೆಸಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾ.24ರಿಂದ ಮೂರು ದಿನ ರಾಜ್ಯದಲ್ಲೇ ಇರಲಿದ್ದಾರೆ.
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಜತೆಗೆ ಪ್ರಧಾನಿ ಮೋದಿ ಎರಡು ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಪರ ಮತ ಯಾಚಿಸಲಿದ್ದಾರೆ. ಬೆಂಗಳೂರಿನಲ್ಲಿ ಮೆಟ್ರೋ ಉದ್ಘಾಟನೆ ನಡೆಸಿದ ಬಳಿಕ ಮಹದೇವಪುರದಲ್ಲಿರುವ ಸತ್ಯಸಾಯಿ ದೇವಸ್ಥಾನದಿಂದ ಸುಮಾರು ಒಂದೂವರೆ ಕಿ.ಮೀ.ವರೆಗೆ ರೋಡ್ ಶೋ ನಡೆಸಲಿದ್ದಾರೆ.
ನಗರ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂಬ ಕಾರಣಕ್ಕೆ ಒಂದೂವರೆ ಕಿ.ಮೀ. ಮಾತ್ರ ರೋಡ್ ಶೋ ನಡೆಸಲು ಬಿಜೆಪಿ ನಿರ್ಧರಿಸಿದೆ. ಇದಾದ ಬಳಿಕ ಚಿಕ್ಕಬಳ್ಳಾಪುರದಲ್ಲಿ ಆಸ್ಪತ್ರೆ ಉದ್ಘಾಟನೆಗೊಳಿಸಿದ ಬಳಿಕ ದಾವಣಗೆರೆಗೆ ತೆರಳುವ ಮೋದಿ ಅಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಅದಾದ ಬಳಿಕವೇ ಅವರು ವಿಜಯಸಂಕಲ್ಪ ಯಾತ್ರೆ ಸಮಾರೋಪ “ಮಹಾಸಂಗಮ’ದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆಂದು ಬಿಜೆಪಿ ಮೂಲಗಳು ತಿಳಿಸಿವೆ.
ಪುತ್ಥಳಿ ಅನಾವರಣ
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾ.24ರಿಂದ ರಾಜ್ಯ ಪ್ರವಾಸ ಪ್ರಾರಂಭಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಕಾರ್ಯಕ್ರಮದ ಬಳಿಕ ಮಾ. 25ರಂದು ಅವರು ದಾವಣಗೆರೆ ಮಹಾಸಂಗಮದಲ್ಲಿ ಪ್ರಧಾನಿ ಜತೆಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಮಾ.26ರಂದು ಬೆಂಗಳೂರಿನಲ್ಲಿ ಕೆಲ ಸಂಘಟನಾತ್ಮಕ ಸಭೆಯನ್ನು ಶಾ ನಡೆಸುವರು.
Related Articles
ಮಾ. 26ರಂದು ಸಂಜೆ ಬೆಂಗಳೂರು ಹಬ್ಬದ ಸಮಾರೋಪದಲ್ಲಿ ಪಾಲ್ಗೊಳ್ಳುವ ಜತೆಗೆ ವಿಧಾನಸೌಧದ ಎದುರು ಸ್ಥಾಪಿಸಲು ಉದ್ದೇಶಿಸಿರುವ ಜಗಜ್ಯೋತಿ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡ ಪುತ್ಥಳಿಯನ್ನು ಅನಾವರಣ ಮಾಡಲಿದ್ದಾರೆ.
25ಕ್ಕೆ ಸತ್ಯಸಾಯಿ ಲೋಕಸೇವಾ ಗ್ರಾಮಕ್ಕೆ ಪ್ರಧಾನಿ ಮೋದಿ ಮೋದಿ
ಚಿಕ್ಕಬಳ್ಳಾಪುರ: ಪ್ರಧಾನಿ ಮೋದಿ ಅವರು ಮಾರ್ಚ್ 25ರಂದು ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ಬಳಿ ಇರುವ ಸತ್ಯಸಾಯಿ ಲೋಕಸೇವಾ ಗ್ರಾಮಕ್ಕೆ ಆಗಮಿಸಿ ಖಾಸಗಿ ವೈದ್ಯಕೀಯ ಕಾಲೇಜು ಉದ್ಘಾಟನೆ ಮಾಡಲಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದರ ಮೂಲಕ ಖ್ಯಾತಿಯಾಗಿರುವ ಮುದ್ದೇನಹಳ್ಳಿ ಗ್ರಾಮದ ಬಳಿ ಇರುವ, ಸತ್ಯ ಸಾಯಿ ಗ್ರಾಮದ ಸತ್ಯ ಸಾಯಿ ಸರಳಾ ಆಸ್ಪತ್ರೆಗೆ 25ರ ಬೆಳಗ್ಗೆ 10.40ಕ್ಕೆ ಪ್ರಧಾನಿಯವರು ಭೇಟಿ ನೀಡಲಿದ್ದು, ಅಂದೇ ಆಸ್ಪತ್ರೆಯ ಎದುರು ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ ಎಂದು ಪ್ರಧಾನ ಸಾರ್ವಜನಿಕ ಸಂಪರ್ಕಾ ಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.