ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾಯೂರಿನಲ್ಲಿ ಅದ್ಭುತ ಚಿತ್ರಕಲೆ ಕೌಶಲ್ಯ ಹೊಂದಿರುವ ಕಲಾವಿದೆ ಜಸ್ನಾ ಸಲೀಂ ಅವರನ್ನು ಬುಧವಾರ ಭೇಟಿಯಾದರು.
ಜಸ್ನಾ ಅವರನ್ನು ಭೇಟಿಯಾದ ನಂತರ ಪಿಎಂ ಮೋದಿಯವರು ಶ್ರೀ ಕೃಷ್ಣನ ಚಿತ್ರ ಕಂಡು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ಕೃಷ್ಣನ ಮೇಲಿನ ಅವರ ಪ್ರಶ್ನಾತೀತ ಭಕ್ತಿಯನ್ನು ಮೆಚ್ಚಿದರು.
”ಗುರುವಾಯೂರಿನಲ್ಲಿ, ನಾನು ಜಸ್ನಾ ಸಲೀಂ ಅವರಿಂದ ಭಗವಾನ್ ಶ್ರೀ ಕೃಷ್ಣ ವರ್ಣಚಿತ್ರವನ್ನು ಸ್ವೀಕರಿಸಿದೆ. ಕೃಷ್ಣ ಭಕ್ತಿಯಲ್ಲಿ ಆಕೆಯ ಪಯಣ ಭಕ್ತಿಯ ಪರಿವರ್ತನಾ ಶಕ್ತಿಗೆ ಸಾಕ್ಷಿಯಾಗಿದೆ. ಪ್ರಮುಖ ಹಬ್ಬಗಳು ಸೇರಿದಂತೆ ಹಲವು ವರ್ಷಗಳಿಂದ ಗುರುವಾಯೂರಿನಲ್ಲಿ ಭಗವಾನ್ ಶ್ರೀ ಕೃಷ್ಣನ ವರ್ಣಚಿತ್ರಗಳನ್ನು ಬರೆಯುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.
ಕೊಯಿಲಾಂಡಿ ಮೂಲದ ಮತ್ತು ಗೃಹಿಣಿ ಜಸ್ನಾ ಸಲೀಂ ಅವರು ಪುಟ್ಟ ಕೃಷ್ಣನ 500 ಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿದ್ದಾರೆ.ಅತ್ಯಾಕರ್ಷಕ ಚಿತ್ರಗಳಿಗಾಗಿ, ಅತ್ಯುತ್ತಮ ಸೃಜನಶೀಲತೆಗಾಗಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದ್ದಾರೆ ಮತ್ತು ರಾಜ್ಯ ಮತ್ತು ಹೊರ ರಾಜ್ಯದ ಹೆಚ್ಚಿನ ಸಂಖ್ಯೆಯ ಖರೀದಿದಾರರ ಗಮನವನ್ನೂ ಸೆಳೆದಿದ್ದಾರೆ.
ಜಸ್ನಾ ಸಲೀಂ ತ್ರಿಶೂರ್‌ನ ಪ್ರಸಿದ್ಧ ಗುರುವಾಯೂರ್ ಶ್ರೀ ಕೃಷ್ಣ ದೇವಸ್ಥಾನಕ್ಕೆ ಪುಟ್ಟ ಕೃಷ್ಣನ ಭಾವಚಿತ್ರಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ ಆದರೆ ಸಂಪ್ರದಾಯ ಮತ್ತು ಪದ್ಧತಿಗಳು ಅವರನ್ನು ದೇಗುಲದ ಒಳಗೆ ಹೋಗಲು ಅಥವಾ ಗರ್ಭಗುಡಿಯ ಮುಂದೆ ಪ್ರಸ್ತುತಪಡಿಸಲು ಅನುಮತಿಸಲಿಲ್ಲ.
ಪುರಾತನ ದೇವಾಲಯದೊಳಗೆ ಹಿಂದೂಯೇತರರಿಗೆ ಪ್ರವೇಶವಿಲ್ಲವಾದ್ದರಿಂದ, ಪ್ರತಿ ವರ್ಷ ವಿಷು ಮತ್ತು ಜನ್ಮಾಷ್ಟಮಿ ದಿನಗಳಲ್ಲಿ ಜಸ್ನಾ ಸಲೀಂ ತನ್ನ ಪೇಂಟಿಂಗ್ ಅನ್ನು ಪೋರ್ಟಲ್‌ನ ಮುಂಭಾಗದ ಹುಂಡಿಯ ಬಳಿ ಇಡುತ್ತಿದ್ದರು ಅಥವಾ ದೇವಾಲಯದ ಸಿಬಂದಿಗೆ ಹಸ್ತಾಂತರಿಸುತ್ತಿದ್ದರು.
“ಕಾರಣ ನನಗೆ ತಿಳಿದಿಲ್ಲ, ನಾನು ನಿಜವಾಗಿ ಆಕಸ್ಮಿಕ ಕಲಾವಿದೆ ಮತ್ತು ಯಾವುದೇ ವೃತ್ತಿಪರ ತರಬೇತಿ ಹೊಂದಿಲ್ಲ. ಆರು ವರ್ಷಗಳ ಹಿಂದೆ ನಾನು ಗರ್ಭಿಣಿಯಾಗಿದ್ದಾಗ ಅಪಘಾತ ಸಂಭವಿಸಿತ್ತು, ನಂತರ ಬೆಡ್ ರೆಸ್ಟ್‌ನಲ್ಲಿದ್ದಾಗ ಇದ್ದಕ್ಕಿದ್ದಂತೆ ಚಿತ್ರ ಬಿಡಿಸಲು ಪ್ರಾರಂಭಿಸಿದೆ. ನಾನು ಶ್ರೀಕೃಷ್ಣನ ಚಿತ್ರವನ್ನು ಮಾತ್ರ ಪರಿಪೂರ್ಣವಾಗಿ ಚಿತ್ರಿಸಬಲ್ಲೆ” ಎಂದು ಜಸ್ನಾ ಸಲೀಂ ಹೇಳುತ್ತಾರೆ.