Advertisement

Canada ಖಲಿಸ್ಥಾನಿಗಳ ಸಹವಾಸವನ್ನು ಕೆನಡಾ ತ್ಯಜಿಸುವುದೊಳಿತು

11:57 PM Sep 11, 2023 | Team Udayavani |

ಕೆನಡಾದಲ್ಲಿ ಭಾರತೀಯರ ಮೇಲಿನ ದಾಳಿ ಹೆಚ್ಚುತ್ತಿರುವುದರಿಂದಲೇ ಅಲ್ಲಿನ ಪ್ರಧಾನಿ ಜಸ್ಟಿನ್‌ ಟ್ರಾಡೊ ಜತೆಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿಲ್ಲ. ಜಿ20 ಸಮ್ಮೇಳನಕ್ಕೆ ಬಂದಿದ್ದ ಇತರ ನಾಯಕರಿಗೆ ದೊರಕಿದ ಸ್ವಾಗತ ಸಿಕ್ಕಿಲ್ಲ, ಖಲಿಸ್ಥಾನ ಪ್ರತ್ಯೇಕತಾವಾದಿಗಳು ನಡೆಸುತ್ತಿರುವ ಕಿಡಿಗೇಡಿತನವನ್ನು ಸಹಿಸಲು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನು ಆ ದೇಶಕ್ಕೆ ನೀಡಬೇಕಾಗಿತ್ತು. ಪ್ರಧಾನಿ ಮೋದಿ ಮತ್ತು ಟ್ರಾಡೋ ಜತೆಗಿನ ಭೇಟಿಯಲ್ಲಿ ಅದನ್ನು ಸ್ಪಷ್ಟವಾಗಿ ರವಾನಿಸಲಾಗಿದೆ. ಹೀಗಾಗಿಯೇ ಟ್ವಿಟರ್‌ನಲ್ಲಿ ಕೆನಡಾ ಪ್ರಧಾನಿಗೆ ಪ್ರತ್ಯೇಕ ಸ್ವಾಗತ ಕೋರಿ ಟ್ವೀಟ್‌, ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆಯೂ ಇರಲಿಲ್ಲ.

Advertisement

ರವಿವಾರ ಹೊಸದಿಲ್ಲಿಯಲ್ಲಿ ಜಿ20 ರಾಷ್ಟ್ರಗಳ ಸಮ್ಮೇಳನದ ಸಂದರ್ಭದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೋ ಜತೆಗಿನ ಭೇಟಿಯ ಸಂದರ್ಭದಲ್ಲಿ ದೇಗುಲಗಳಲ್ಲಿ ಪ್ರಚೋದನಾಕಾರಿ ಬರಹಗಳ ಬಗ್ಗೆ ಮೋದಿ ಸ್ಪಷ್ಟವಾಗಿ ಉಲ್ಲೇಖ ಮಾಡಿ, ಅಂಥ ಘಟನೆಗಳನ್ನು ತಡೆಯುವುದು ಅಗತ್ಯವಿದೆ ಎಂದಿದ್ದರು. ಇಷ್ಟು ಮಾತ್ರವಲ್ಲ ಮಾನವ ಕಳ್ಳ ಸಾಗಾಟ, ಮಾದಕ ವಸ್ತುಗಳ ಸಾಗಣೆ ಮೇಲೆ ಗರಿಷ್ಠ ಮಟ್ಟದ ನಿಗಾ ಇರಿಸುವ ಬಗ್ಗೆ ಪ್ರಧಾನಿ ಕೆನಡಾ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

ಜಸ್ಟಿನ್‌ ಟ್ರಾಡೊ ಸಿಂಗಾಪುರ ಪ್ರವಾಸದ ವೇಳೆ ನಮ್ಮ ದೇಶದ ಆಂತರಿಕ ವಿಚಾರಗಳಲ್ಲಿ ಭಾರತ ಮಧ್ಯಪ್ರವೇಶ ಮಾಡುತ್ತಿದೆ. ಅದನ್ನು ಹೊಸದಿಲ್ಲಿಗೆ ತೆರಳಿದಾಗ ಪ್ರಧಾನಿ ಮೋದಿ ಜತೆಗೆ ಪ್ರಸ್ತಾವ ಮಾಡುವುದಾಗಿಯೂ ಹೇಳಿದ್ದರು. ಅದಕ್ಕಿಂತ ಹೆಚ್ಚಿಗೆ ಟ್ರಾಡೋ ಅವರು ತಮ್ಮ ದೇಶದಲ್ಲಿ ಇರುವ ಭಾರತೀಯರ ರಕ್ಷಣೆ ಬಗ್ಗೆ ನಿಗಾ ವಹಿಸುವುದು ಅಗತ್ಯವಾಗಿದೆ.

ಕೆನಡಾದ ಅಭಿವೃದ್ಧಿಯಲ್ಲಿ ಭಾರತೀಯರ ಪಾಲೂ ಇದೆ ಎಂಬುದನ್ನು ಅಲ್ಲಿನ ಸರಕಾರ ನೆನಪಿನಲ್ಲಿ ಇರಿಸಬೇಕಾದ ಅಗತ್ಯವಿದೆ. ಆ ದೇಶಕ್ಕೆ ವಲಸೆ ಬಂದಿರುವ ರಾಷ್ಟ್ರಗಳ ಪ್ರಜೆಗಳ ಪೈಕಿ ಶೇ.18.6 ಮಂದಿ ಭಾರತೀಯರೇ. 2021ರ ಅಲ್ಲಿನ ಸರಕಾರಿ ದಾಖಲೆಗಳ ಪ್ರಕಾರ ಆ ದೇಶದ ಒಟ್ಟು ಜನಸಂಖ್ಯೆ 3.82 ಕೋಟಿ. ಈ ಪೈಕಿ, ಭಾರತದಿಂದ ಅಲ್ಲಿಗೆ ತೆರಳಿ ಪೌರತ್ವ ಸ್ವೀಕರಿಸಿದವರು, ಭಾರತೀಯ ಮೂಲದವರು ಹೀಗೆ ಒಟ್ಟು ಭಾರತೀಯರ ಸಂಖ್ಯೆ 18.6 ಲಕ್ಷ ಮಂದಿ. ಶಿಕ್ಷಣ, ಉದ್ಯೋಗಕ್ಕಾಗಿ ಭಾರತೀಯರು ಆ ದೇಶದ ಬೊಕ್ಕಸಕ್ಕೆ ಗಣನೀಯ ಪ್ರಮಾಣದ ಕೊಡುಗೆಗಳನ್ನು ನೀಡುತ್ತಿದ್ದಾರೆ.

ಇನ್ನು ರಾಜಕೀಯವಾಗಿ ನೋಡುವುದಿದ್ದರೆ ಜಸ್ಟಿನ್‌ ಟ್ರಾಡೋ ಅವರ ಲಿಬರಲ್‌ ಪಾರ್ಟಿ ಆಫ್ ಕೆನಡಾಕ್ಕೆ ಅಲ್ಲಿನ ಸಂಸತ್‌ನಲ್ಲಿ ಬಹುಮತ ಇಲ್ಲ. 2021ರಲ್ಲಿ ನಡೆಸಲಾಗಿದ್ದ ಚುನಾವಣೆಯಲ್ಲಿ ಕೂಡ ಅಲ್ಪಮತವೇ ಪ್ರಾಪ್ತಿ ಯಾಗಿತ್ತು. ಕೆನಡಾ ಸಂಸತ್‌ನ ಕೆಳಮನೆ ಹೌಸ್‌ ಆಫ್ ಕಾಮನ್ಸ್‌ನ ಒಟ್ಟು ಸ್ಥಾನ 338ರ ಪೈಕಿ ಸರಳ ಬಹುಮತಕ್ಕೆ 170 ಸ್ಥಾನ ಬೇಕು. ಆದರೆ ಟ್ರಾಡೋ ಸರಕಾರಕ್ಕೆ 160 ಸ್ಥಾನಗಳು ಇವೆ. ಅದಕ್ಕಾಗಿ ಭಾರತೀಯ ಮೂಲದ ಜಗ್ಮಿತ್‌ ಸಿಂಗ್‌ ಅವರ ನ್ಯೂ ಡೆಮಾಕ್ರಾಟಿಕ್‌ ಪಕ್ಷದ 24 ಮಂದಿ ಸದಸ್ಯರ ಬೆಂಬಲ ಅನಿವಾರ್ಯ. ಸಿಂಗ್‌ ಅವರ ಪಕ್ಷ ಪ್ರತ್ಯೇಕತಾವಾದಿ ಸಂಘಟನೆ ಖಲಿಸ್ಥಾನಿಗಳಿಗೆ ಬೆಂಬಲ ನೀಡುತ್ತಿದೆ. ಅದೇನಿದ್ದರೂ ಅವರ ತಲೆನೋವು. ಕೆನಡಾ ಮತ್ತು ಭಾರತದ ನಡುವೆ ನಡೆಯಬೇಕಾಗಿದ್ದ ಮುಕ್ತ ವ್ಯಾಪಾರ ಒಪ್ಪಂದ ಬಗೆಗಿನ ಮಾತುಕತೆಗಳೂ ಕೂಡ ಏಕಾಏಕಿ ಸ್ಥಗಿತಗೊಂಡಿದ್ದವು.

Advertisement

ಈ ಎಲ್ಲ ಕಾರಣಗಳಿಂದ ಟ್ರಾಡೋ ಸರಕಾರ ಭಾರತದ ಜತೆಗೆ ಇರುವ ಪರಿಣಾಮಾತ್ಮಕ ಬಾಂಧವ್ಯದ ಲಾಭ ಪಡೆಯಬೇಕೇ ಹೊರತು ಪ್ರತ್ಯೇಕತಾವಾದಿಗಳ ಹಿಡಿತದಲ್ಲಿ ಬೀಳಬಾರದು.

Advertisement

Udayavani is now on Telegram. Click here to join our channel and stay updated with the latest news.

Next