ಅಹಮದಾಬಾದ್: ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾಗಿರುವ ಸೈನಿಕರ ತ್ಯಾಗದ ಬಗ್ಗೆ ದುಃಖಿಸದ ಜನರನ್ನು(ವಿಪಕ್ಷಗಳು)ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಅಕ್ಟೋಬರ್ 31, 2020) ಹೇಳಿದರು.
ಅವರು ರಾಷ್ಟ್ರೀಯ ಏಕತಾ ದಿನಾಚರಣೆಯಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತ ದೇಶದ ಯೋಧರಿಗೆ ಗೌರವ ಸಲ್ಲಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 144ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕೇವಾಡಿಯಾದಲ್ಲಿ ಮಾತನಾಡಿದ ಅವರು, ಉಗ್ರರ ದಾಳಿಯಲ್ಲಿ ಯೋಧರು ಹುತಾತ್ಮರಾಗಿದ್ದರೆ, ಈ ಜನರು ಕೇವಲ ರಾಜಕೀಯ ಮಾಡುವುದರಲ್ಲಿಯೇ ಕಾಲ ಕಳೆದಿದ್ದರು. ದೇಶದ ಹಿತಾಸಕ್ತಿಯ ವಿಚಾರಗಳಲ್ಲಿ ಇಂತಹ ರಾಜಕೀಯ ಮಾಡಬೇಡಿ ಎಂದು ನಾನು ಮನವಿ ಮಾಡಿಕೊಳ್ಳುವುದಾಗಿ ಪರೋಕ್ಷವಾಗಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನದ ಸಂಸತ್ ನಲ್ಲಿಯೇ ಪುಲ್ವಾಮಾ ಭಯೋತ್ಪಾದಕ ಘಟನೆಯ ಕುರಿತು ಸತ್ಯವನ್ನು ಬಯಲುಗೊಳಿಸಿದೆ. ಇಂದು ಜಗತ್ತಿನ ಎಲ್ಲಾ ದೇಶಗಳು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಬೇಕಾದ ಅಗತ್ಯವಿದೆ. ಯಾರೊಬ್ಬರಿಗೂ ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಲಾಭವಿಲ್ಲ. ಭಾರತ ಸದಾ ಭಯೋತ್ಪಾದನೆ ವಿರುದ್ಧ ಹೋರಾಡಲಿದೆ ಎಂದರು.
ಇದನ್ನೂ ಓದಿ: ಮದುವೆ ಕಾರಣಕ್ಕಾಗಿ ಮತಾಂತರ ಸ್ವೀಕಾರಾರ್ಹವಲ್ಲ: ಅಲಹಾಬಾದ್ ಹೈಕೋರ್ಟ್
ಕಾಶ್ಮೀರದ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ಕಾಶ್ಮೀರ ಇಂದು ಹೊಸ ಅಭಿವೃದ್ದಿಯ ದಿಕ್ಕಿನತ್ತ ಹೆಜ್ಜೆ ಹಾಕುತ್ತಿದೆ. ಈಶಾನ್ಯದಲ್ಲಿಯೂ ಶಾಂತಿ ನೆಲೆಸಿದೆ. ಅಷ್ಟೇ ಅಲ್ಲ ಅಭಿವೃದ್ದಿಯೂ ಕೂಡಾ ಆಗುತ್ತಿದೆ ಎಂದು ಪ್ರಧಾನಿ ಹೇಳಿದರು.