ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಗುರುವಾರ (ಸೆ.05) ಸಿಂಗಾಪುರ ಪ್ರಧಾನಿ ಲಾರೆನ್ಸ್ ವೋಂಗ್(Lawrence wong) ಅವರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿ ಕುರಿತು ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಪ್ರಧಾನಿ ವೋಂಗ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಭೇಟಿ ನೀಡಿದ್ದು, ಬುಧವಾರ ಸಿಂಗಾಪುರಕ್ಕೆ ಆಗಮಿಸಿದ್ದ ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದರು.
ಅಧಿಕೃತ ಮಾತುಕತೆಗೂ ಮೊದಲು ಪ್ರಧಾನಿ ಮೋದಿ ಅವರನ್ನು ಸಿಂಗಾಪುರ್ ಸಂಸತ್ ಭವನದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು, ವಿಸಿಟರ್ಸ್ ಪುಸ್ತಕದಲ್ಲಿ ಸಹಿ ಹಾಕಿದ್ದರು. ವೋಂಗ್ ಅವರು ಸಿಂಗಾಪುರ್ ಪ್ರಧಾನಿಯಾದ ನಂತರ ಇಬ್ಬರು ನಾಯಕರ ಪ್ರಥಮ ಭೇಟಿ ಇದಾಗಿದೆ ಎಂದು ವರದಿ ವಿವರಿಸಿದೆ.
ಉಭಯ ದೇಶಗಳ ನಡುವೆ ನಾಲ್ಕು ಒಪ್ಪಂದಕ್ಕೆ ಈ ಸಂದರ್ಭದಲ್ಲಿ ಸಹಿ ಹಾಕಿರುವುದಾಗಿ ವರದಿ ತಿಳಿಸಿದೆ. ಸಿಂಗಾಪುರ ಮತ್ತು ಭಾರತದ ನಡುವಿನ ಸ್ನೇಹ ಸಂಬಂಧ ಇನ್ನಷ್ಟು ವೃದ್ಧಿಸುವ ನಿಟ್ಟಿನಲ್ಲಿ ಪ್ರಧಾನಿ ವೋಂಗ್ ಮತ್ತು ಮೋದಿ ಮಾತುಕತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.