Advertisement

ಸಿಕ್ಖರ ಮನವೊಲಿಕೆ ಯತ್ನ; ಗಣ್ಯರೊಂದಿಗೆ ತಮ್ಮ ನಿವಾಸದಲ್ಲೇ ಮೋದಿ ಸಭೆ

01:16 AM Feb 19, 2022 | Team Udayavani |

ನವದೆಹಲಿ: ಪಂಜಾಬ್‌ ವಿಧಾನಸಭೆ ಚುನಾವಣೆಗೆ ಕೇವಲ 2 ದಿನಗಳು ಬಾಕಿಯಿರುವಂತೆಯೇ ಅಚ್ಚರಿಯ ಬೆಳವಣಿಗೆಯೆಂಬಂತೆ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನಿವಾಸದಲ್ಲೇ ಸಿಖ್‌ ಸಮುದಾಯದ ಪ್ರಮುಖರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಸಮುದಾಯಕ್ಕಾಗಿ ತಮ್ಮ ಸರ್ಕಾರ ಕೈಗೊಂಡಿರುವ ಕೆಲಸಗಳ ಬಗ್ಗೆಯೂ ವಿವರಿಸಿದ್ದಾರೆ.

Advertisement

ಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿರುವ ಮೋದಿ, “1947ರಲ್ಲಿ ದೇಶ ವಿಭಜನೆಯಾದಾಗ ಸಿಖ್ಖರ ಪವಿತ್ರ ತಾಣ ಕರ್ತಾರ್ಪುರವು ಪಾಕಿಸ್ತಾನದ ವ್ಯಾಪ್ತಿಗೆ ಬರದಂತೆ ನೋಡಿಕೊಳ್ಳುವಲ್ಲಿ ಕಾಂಗ್ರೆಸ್‌ ವಿಫ‌ಲವಾಯಿತು. ಪ್ರಯತ್ನ ಪಟ್ಟಿದ್ದರೆ 1965 ಮತ್ತು 1971ರ ಯುದ್ಧದ ನಂತರವಾದರೂ ಆ ಪ್ರದೇಶವನ್ನು ಭಾರತದ ತೆಕ್ಕೆಗೆ ಪಡೆಯಬಹುದಾಗಿತ್ತು’ ಎಂದಿದ್ದಾರೆ.

ಸಭೆ ಬಳಿಕ ಟ್ವೀಟ್‌ ಮಾಡಿದ ಮೋದಿ, “ಸಿಖ್‌ ಧಾರ್ಮಿಕ ಮತ್ತು ಸಮುದಾಯದ ನಾಯಕರು ಸಿಖ್‌ ಸಂಸ್ಕೃತಿಯನ್ನು ಜನಪ್ರಿಯಗೊಳಿಸುವಲ್ಲಿ, ಸಮಾಜಕ್ಕೆ ಸೇವೆ ಸಲ್ಲಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸಿಖ್‌ ಗಣ್ಯರು ಆಡಿರುವ ಮಾತುಗಳಿಂದ ನಾನು ಧನ್ಯನಾಗಿದ್ದೇನೆ. ಅವರ ಆಶೀರ್ವಾದವು ಸಮಾಜಕ್ಕಾಗಿ ಮತ್ತಷ್ಟು ದುಡಿಯಲು ನನಗೆ ಪ್ರೇರಣೆ ನೀಡಿದೆ’ ಎಂದಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳು ಪಂಜಾಬ್‌ನಲ್ಲಿ ಬಿಜೆಪಿ ವಿರೋಧಿ ಅಲೆ ಮೂಡಿಸಿರುವ ಹೊತ್ತಲ್ಲೇ ಸಿಖ್‌ ಗಣ್ಯರೊಂದಿಗೆ ಮೋದಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಸಭೆಯಲ್ಲಿ ದೆಹಲಿ ಗುರುದ್ವಾರ ಸಮಿತಿ ಅಧ್ಯಕ್ಷ ಹರ್ಮೀತ್‌ ಸಿಂಗ್‌ ಕಾಲ್ಕಾ, ಪದ್ಮಶ್ರೀ ಪುರಸ್ಕೃತ ಬಾಬಾ ಬಲ್‌ಬಿàರ್‌ ಸಿಂಗ್‌ ಸಿಚೆವಾಲ್‌, ಮಹಾಂತ ಕರಂಜಿತ್‌ ಸಿಂಗ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Advertisement

1 ಲಕ್ಷ ಸರ್ಕಾರಿ ಉದ್ಯೋಗ ಸೃಷ್ಟಿ: ಕಾಂಗ್ರೆಸ್‌
ಶುಕ್ರವಾರ ಕಾಂಗ್ರೆಸ್‌ ಪಕ್ಷವು ಪಂಜಾಬ್‌ನಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಹಿಳೆಯರಿಗೆ ಮಾಸಿಕ 1,100 ರೂ., ವರ್ಷಕ್ಕೆ 8 ಉಚಿತ ಗ್ಯಾಸ್‌ ಸಿಲಿಂಡರ್‌ ಮತ್ತು 1 ಲಕ್ಷ ಸರ್ಕಾರಿ ಉದ್ಯೋಗ ಸೃಷ್ಟಿಯ ಆಶ್ವಾಸನೆಯನ್ನು ನೀಡಲಾಗಿದೆ. ಮದ್ಯ ಹಾಗೂ ಮರಳು ಗಣಿಗಾರಿಕೆಗೆ ನಿಗಮಗಳನ್ನು ರಚಿಸುವ ಮೂಲಕ ಮಾಫಿಯಾರಾಜ್‌ಗೆ ಅಂತ್ಯ ಹಾಡುವುದಾಗಿಯೂ ಪಕ್ಷ ಘೋಷಿಸಿದೆ.

ನಾನು ಜಗತ್ತಿನ “ಸ್ವೀಟ್‌ ಟೆರರಿಸ್ಟ್‌’!
“ಖಲಿಸ್ತಾನದ ಪ್ರಧಾನಿಯಾಗಲು ಬಯಸಿರುವುದಾಗಿ ಕೇಜ್ರಿವಾಲ್‌ ಹೇಳಿದ್ದರು’ ಎಂಬ ಆಪ್‌ನ ಮಾಜಿ ನಾಯಕ ಕುಮಾರ್‌ ವಿಶ್ವಾಸ್‌ ಆರೋಪಕ್ಕೆ ಶುಕ್ರವಾರ ದೆಹಲಿ ಸಿಎಂ ಪ್ರತಿಕ್ರಿಯಿಸಿದ್ದಾರೆ. ವಿಶ್ವಾಸ್‌ ಅವರ ಹೇಳಿಕೆಯು ನನಗೆ ನಗು ತರಿಸುತ್ತಿದೆ. ಹಾಗೊಂದು ವೇಳೆ ನಾನು ಪ್ರತ್ಯೇಕತಾವಾದಿ ಆದರೂ, “ನಾನು ಶಾಲೆ, ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಜಗತ್ತಿನ ಒಳ್ಳೆಯ ಭಯೋತ್ಪಾದಕ’ನಾಗುತ್ತೇನೆ. 100 ವರ್ಷಗಳ ಹಿಂದೆ ಭಗತ್‌ಸಿಂಗ್‌ ಅವರನ್ನೂ ಬ್ರಿಟಿಷರು ಭಯೋತ್ಪಾದಕ ಎಂದಿದ್ದರು. 100 ವರ್ಷಗಳ ಬಳಿಕ ಈಗ ಇತಿಹಾಸ ಮರುಕಳಿಸಿದೆ. ಭಗತ್‌ಸಿಂಗ್‌ರ ಅನುಯಾಯಿಯಾದ ನನ್ನನ್ನು ಈ ಪಕ್ಷಗಳೆಲ್ಲ ಭಯೋತ್ಪಾದಕ ಎನ್ನುತ್ತಿದ್ದಾರೆ. ಆದರೆ ಜನರಿಗೆ ಸತ್ಯ ಗೊತ್ತಿದೆ. ಭ್ರಷ್ಟ ರಾಜಕಾರಣಿಗಳಿಗೆ ನಾನು ಸದಾ ಭಯೋತ್ಪಾದಕನೇ ಎಂದಿದ್ದಾರೆ ಕೇಜ್ರಿವಾಲ್‌. ಈ ನಡುವೆ, ಕುಮಾರ್‌ ವಿಶ್ವಾಸ್‌ ಅವರ ಭದ್ರತೆಯನ್ನು ಪರಿಶೀಲಿಸುತ್ತಿದ್ದು, ಅಗತ್ಯಬಿದ್ದರೆ ಕೇಂದ್ರ ಸರ್ಕಾರದ ವತಿಯಿಂದ ಭದ್ರತೆ ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಆಪ್‌ ಸಿಎಂ ಅಭ್ಯರ್ಥಿ ಭಗವಂತ ಮನ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರಿಗೆ “ಕಾಮಿಡಿ’ಯಲ್ಲಿ ಉಜ್ವಲ ಭವಿಷ್ಯವಿದೆ. ಆ ಕ್ಷೇತ್ರದಲ್ಲಿ ಹಣವೂ ಸುಲಭವಾಗಿ ದೊರೆಯುತ್ತದೆ.
– ಹರ್‌ದೀಪ್‌ ಸಿಂಗ್‌ ಪುರಿ, ಕೇಂದ್ರ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next