ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಇಲ್ಲಿನ ತಾಲ್‌ಕಟೋರ ಸ್ಟೇಡಿಯಂ ನಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಗೆ ಚಾಲನೆ ನೀಡಿದರು. ದೇಶದ ಮೂಲೆ ಮೂಲೆಗೂ ಬ್ಯಾಂಕಿಂಗ್ ಸೇವೆಯನ್ನು ತಲುಪಿಸುವಲ್ಲಿ ಐಪಿಪಿಬಿ ನಿರ್ಣಾಯಕ ಮತ್ತು ಮಹತ್ವದ ಪಾತ್ರ ವಹಿಸಲಿದೆ ಎಂದರು.
ದಿನನಿತ್ಯ ಪೋಸ್ಟ್ ಮ್ಯಾನ್‌ಗಳು ಮಾಡುವ ಕೆಲಸವನ್ನು ಪ್ರಶಂಸಿಸಿದ ಪ್ರಧಾನಿ ಮೋದಿ, ಐಪಿಪಿಬಿ ಮೂಲಕ ಅವರ ಪಾತ್ರವು ಮಹತ್ತರ ಮಟ್ಟದಲ್ಲಿ ವಿಸ್ತರಿಸಲಿದೆ ಎಂದರು.
‘ಪೋಸ್ಟ್ ಮ್ಯಾನ್‌ಗಳು ಈ ತನಕ ಅಂಚೆ, ಪಾರ್ಸೆಲ್ ಗಳನ್ನು ತರುವವರಾಗಿ ಎಲ್ಲರಿಗೂ ತಿಳಿದವರಿರುತ್ತಾರೆ. ಇನ್ನು ಮುಂದೆ ಅವರು ಜನರ ಮನೆ ಬಾಗಿಲಿಗೆ ಬ್ಯಾಂಕ್ ಮತ್ತು ಹಣಕಾಸು ಸೇವೆಯನ್ನು ಕೂಡ ಕೊಂಡೊಯ್ಯಲಿದ್ದಾರೆ. ಇಂಡಿಯಾ ಪೇಮೆಂಟ್ಸ್ ಬ್ಯಾಂಕ್ ಮೂಲಕ ನಾವಿನ್ನು ದೇಶದ ಮೂಲೆ ಮೂಲೆಗಳಲ್ಲಿನ ಜನರನ್ನು ಹಣಕಾಸು ಮತ್ತು ಬ್ಯಾಂಕಿಂಗ್ ಸೇವೆಯ ಮೂಲಕ ತಲುಪಲಿದ್ದೇವೆ’ ಎಂದು ಮೋದಿ ಹೇಳಿದರು.
ಅಂಚೆ ಇಲಾಖೆ ದೇಶದ ಉದ್ದಗಲದಲ್ಲಿ ಹೊಂದಿರುವ ಬೃಹತ್ ಮತ್ತು ವ್ಯಾಪಕ ಜಾಲದ ಮೂಲಕ ಜನರಿಗೆ ಐಪಿಪಿಬಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆ ಪ್ರಾಪ್ತವಾಗಲಿದೆ. 650 ಶಾಖೆಗಳು, 3,250 ಆಕ್ಸೆಸ್ ಪಾಯಿಂಟ್‌ಗಳನ್ನು ಐಪಿಪಿಬಿ ಹೊಂದಿರುತ್ತದೆ. ದೇಶದ ಎಲ್ಲ 1.55 ಲಕ್ಷ ಅಂಚೆ ಕಚೇರಿಗಳು ಐಪಿಪಿಬಿ ವ್ಯವಸ್ಥೆಗೆ ಡಿ.31ರೊಳಗಾಗಿ ಜೋಡಿಸಲ್ಪಡಲಿವೆ. ಇದರಿಂದ ದೇಶದಲ್ಲಿ ಗ್ರಾಮೀಣ-ನಗರ ಹಣಕಾಸು, ಬ್ಯಾಂಕಿಂಗ್ ಸೇವಾ ಕ್ರಾಂತಿಯೇ ಆಗಲಿದೆ ಎಂದು ಮೋದಿ ಹೇಳಿದರು.