ದಮನ್: ಗುಜರಾತ್‌ಗೆ ಹೊಂದಿಕೊಂಡಿದ್ದು, ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿದ್ದು, ಪರ್ಯಾಯ ದ್ವೀಪಗಳಂತಿರುವ ಕೇಂದ್ರಾಡಳಿತ ಪ್ರದೇಶಗಳಾದ ದಿಯು, ದಮನ್‌ನಲ್ಲಿ ಶನಿವಾರ ಅಕ್ಷರಶಃ ಹಬ್ಬದ ವಾತಾವರಣವಿತ್ತು. ಪ್ರಧಾನಿ ಮೋದಿ, ಈ ಪ್ರದೇಶಗಳಲ್ಲಿ ಸುಮಾರು 1 ಸಾವಿರ ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರಲ್ಲದೆ, ಈ ಪ್ರಾಂತ್ಯಗಳಿಗೆ ವಿಮಾನ, ಹೆಲಿಕಾಪ್ಟರ್ ಸೌಲಭ್ಯ, ಶಾಲೆ, ಅಂಗನವಾಡಿಗಳನ್ನು ಉದ್ಘಾಟಿಸಿದರಲ್ಲದೆ, ವಿವಿಧ ಮಹತ್ವದ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.
ಈ ಸರಣಿ ಕಾರ್ಯಕ್ರಮಗಳಲ್ಲಿ ಮಹತ್ವ ವಾದದ್ದು, ಗುಜರಾತ್ ರಾಜಧಾನಿ ಅಹ್ಮದಾ ಬಾದ್‌ನಿಂದ ಡಿಯುಗೆ ನೇರ ವಿಮಾನ ಸೌಲಭ್ಯ. ಇದರಡಿ, “ಏರ್ ಒಡಿಶಾ’ ಸಂಸ್ಥೆ, “ಉಡಾನ್’ ಯೋಜನೆಯಡಿ ಸೇವೆ ನೀಡಲಿದೆ. ಇದಲ್ಲದೆ, ದಮನ್- ದಿಯು ನಡುವೆ ಹೆಲಿಕಾಪ್ಟರ್ ಸೇವೆ ಲೋಕಾರ್ಪಣೆಗೊಳಿಸಲಾಯಿತು .
ಶಂಕು ಸ್ಥಾಪನೆ: ನೂತನವಾಗಿ ನಿರ್ಮಿಸಲಾಗುವ ನೀರು ನಿರ್ವಹಣಾ ಘಟಕ, ಗ್ಯಾಸ್ ಪೈಪ್‌ಲೈನ್, ವಿದ್ಯುತ್ ಉಪ ಕೇಂದ್ರ, ಪುರಸಭೆ ಮಾರುಕಟ್ಟೆ ಹಾಗೂ ಒಂದು ಕಬ್ಬಿಣದ ಮೇಲ್ಸೇತುವೆ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.
ಕಾಂಗ್ರೆಸ್ ಪ್ರತಿಭಟನೆ
ಮೋದಿ ಕಾರ್ಯಕ್ರಮ ವಿರೋಧಿಸಿ ಕಾಂಗ್ರೆಸ್ ನಾಯಕರು, ಪ್ರತಿಭಟನಾ ಸೂಚಕವಾಗಿ ಕಪ್ಪು ಬಲೂನ್‌ಗಳನ್ನು ಹಾರಿಸಿದರು. ಇದಕ್ಕೂ ಮುನ್ನ, ಮೋದಿಯವರ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ದೌಡಾಯಿಸಿದಾಗ, ಅವರನ್ನು ಪೊಲೀಸರು ತಡೆದರು.