ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ನಡೆದ ಮೊಬೈಲ್ ಕಾಂಗ್ರೆಸ್ 2022 ಕಾರ್ಯಕ್ರಮದಲ್ಲಿ 5ಜಿ ಸೇವೆಗಳಿಗೆ ಚಾಲನೆ ನೀಡಿದರು. ದೀಪಾವಳಿ ವೇಳೆಗೆ ಬಳಕೆದಾರರು 5ಜಿ ಸೇವೆಗಳನ್ನು ಆನಂದಿಸಲು ಸಾಧ್ಯವಾಗಲಿದೆ. ಏರ್ ಟೆಲ್, ರಿಲಯನ್ಸ್ ಜಿಯೋ ಮತ್ತು ಕ್ವಾಲ್‌ಕಾಮ್ ನಂತಹ ಹಲವಾರು ಉನ್ನತ ಕಂಪನಿಗಳು ತಮ್ಮ 5ಜಿ ಸೇವೆಗಳು ಮತ್ತು ಅದರ ಪ್ರಯೋಜನಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರದರ್ಶಿಸಿದವು.
ಇದೇ ವೇಳೆಗೆ ಅವರು 5ಜಿ ತಂತ್ರಜ್ಞಾನದ ಸ್ಥಳೀಯ ಬೆಳವಣಿಗೆಗಳು ಮತ್ತು ಆರೋಗ್ಯ ಕ್ಷೇತ್ರದಲ್ಲಿ 5ಜಿ ಸೇವೆಯ ಬಳಕೆಯ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದುಕೊಂಡರು.
ಈ 5ಜಿ ನೆಟ್‌ವರ್ಕ್ ಬಳಕೆದಾರರಿಗೆ ವೇಗವಾದ ಇಂಟರ್ನೆಟ್ ವೇಗವನ್ನು ನೀಡುವುದಲ್ಲದೆ, ವಿಪತ್ತು ನಿರ್ವಹಣೆ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಸರ್ಕಾರಕ್ಕೆ ಬೆಂಬಲವನ್ನು ನೀಡಲು ಸಹಾಯ ಮಾಡುತ್ತದೆ.
ಅತ್ಯುತ್ತಮ ಗುಣಮಟ್ಟ ಮತ್ತು ಅತ್ಯಂತ ಅಗ್ಗದ ದರದಲ್ಲಿ ಜಿಯೋ 5ಜಿ ಸೇವೆಗಳನ್ನು ಒದಗಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. 2023ರ ಡಿಸೆಂಬರ್ ವೇಳೆ ದೇಶದ ಮೂಲೆ ಮೂಲೆಗೆ 5ಜಿ ಸೇವೆ ತಲುಪಲಿದೆ ಎಂದಿದ್ದಾರೆ.
ಭಾರತದಲ್ಲಿ 5ಜಿ ಇಂಟರ್ನೆಟ್ ಸೇವೆಗಳು ಮೊದಲ ಹಂತದಲ್ಲಿ 13 ನಗರಗಳಲ್ಲಿ ಲಭ್ಯವಿರಲಿವೆ. ಬೆಂಗಳೂರು, ಅಹಮದಾಬಾದ್, ಚಂಡೀಗಢ, ಚೆನ್ನೈ, ನವದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೊದಲ ಹಂತದಲ್ಲಿ 5ಜಿ ಸೇವೆ ಲಭ್ಯವಿರಲಿದೆ. ಅಲ್ಲದೇ 5ಜಿ ಸೇವೆಗಳ ಲಭ್ಯತೆಗಾಗಿ ಸಣ್ಣ ಟವರ್‌ಗಳನ್ನು ಸ್ಥಾಪಿಸಲು ನವದೆಹಲಿಯಲ್ಲಿ ಸುಮಾರು 10,000 ಸ್ಥಳಗಳನ್ನು ಈಗಾಗಲೇ ದೆಹಲಿ ಲೋಕೋಪಯೋಗಿ ಇಲಾಖೆ ಗುರುತಿಸಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿಯ ಟಿ20 ದಾಖಲೆ ಸರಿಗಟ್ಟಿದ ಬಾಬರ್ ಅಜಂ
5ಜಿ ಇಂಟರ್ನೆಟ್ 4ಜಿಗಿಂತ ಸುಮಾರು ಹತ್ತು ಪಟ್ಟು ಹೆಚ್ಚು ವೇಗ ಇರಲಿದೆ. 3ಜಿ ಮತ್ತು 4ಜಿ ಸೇವೆಗಳಂತೆ, ಟೆಲಿಕಾಂ ಕಂಪನಿಗಳು ಶೀಘ್ರದಲ್ಲೇ 5ಜಿ ಸೇವೆಗಳ ಬಗೆಗಿನ ದರಪಟ್ಟಿ ಘೋಷಿಸಲಿವೆ. ಗ್ರಾಹಕರು ತಮ್ಮ ಸಾಧನಗಳಲ್ಲಿ 5ಜಿ ಸೇವೆಗಳನ್ನು ಬಳಸಲು ಕೊಂಚ ಹೆಚ್ಚು ಮೊತ್ತವನ್ನು ಪಾವತಿಸಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಇನ್ನೊಂದೆಡೆ, ಏರ್‌ಟೆಲ್ ಚೀಫ್ ಟೆಕ್ನಾಲಜಿ ಆಫೀಸರ್(ಸಿಟಿಒ) ರಣದೀಪ್ ಸೆಖೋನ್ ಪ್ರಕಾರ, “ಜಾಗತಿಕವಾಗಿ 5ಜಿ ಮತ್ತು 4ಜಿ ದರಗಳ ನಡುವೆ ಭಾರಿ ವ್ಯತ್ಯಾಸವಿಲ್ಲ. ಹಾಗಾಗಿ ಭಾರತದಲ್ಲಿ 5ಜಿ ಸೇವೆಗಳ ದರವು 4ಜಿ ದರಗಳಿಗೆ ಸಮಾನವಾಗಿರಲಿದೆ. ನಾವು ಕೂಡ ಇದನ್ನೇ ನಿರೀಕ್ಷಿಸುತ್ತಿದ್ದೇವೆ,’ ಎಂದು ಹೇಳಿದ್ದಾರೆ.