ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಕಳೆದಿದೆ. ನೋಟು ಅಮಾನ್ಯ, ಜಿಎಸ್‌ಟಿ ಸೇರಿದಂತೆ ಪ್ರಮುಖ ಆರ್ಥಿಕ ಮತ್ತು ರಾಜಕೀಯ ನಿರ್ಣಯ ತೆಗೆದುಕೊಂಡದ್ದಾಗಿದೆ.
ಅಮೆರಿಕದ ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಸಮೀಕ್ಷೆ ಪ್ರಕಾರ, ಭಾರತೀಯರಿಗೆ ನರೇಂದ್ರ ಮೋದಿಯವರೇ ನೆಚ್ಚಿನ ನಾಯಕ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 2016ರಲ್ಲಿ ಹೊರಬಿದ್ದಿದ್ದ ಅಧ್ಯಯನವೊಂದರಲ್ಲಿ ಅವರ ಚರಿಷ್ಮಾ ಕೊಂಚ ಇಳಿಮುಖವಾಗಿತ್ತು. ಹಾಲಿ ಸಮೀಕ್ಷೆಯಲ್ಲಿ ಶೇ.88 ಮಂದಿ ಅವರೇ ನೆಚ್ಚಿನ ನಾಯಕ ಎಂದು ಹೇಳಿಕೊಂಡಿದ್ದಾರೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿಯೇ ಮೋದಿ ಬಗ್ಗೆ ಹೆಚ್ಚಿನ ಒಲವು ಅಂದರೆ , ಶೇ.95ರಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ನೋಟು ಅಮಾನ್ಯ, ಜಿಎಸ್‌ಟಿ ಜಾರಿ ಬಗ್ಗೆ ಪ್ರತಿಪಕ್ಷಗಳು ಹುಯಿಲೆಬ್ಬಿಸಿದರೂ ದೇಶವಾಸಿಗಳು ಅವರ ಮೇಲಿನ ವಿಶ್ವಾಸ ಕಳೆದು ಕೊಂಡಿಲ್ಲ. ಶೇ.83 ಮಂದಿ ಅರ್ಥವ್ಯವಸ್ಥೆ ಉತ್ತಮವಾಗಿದೆ ಎಂದಿದ್ದಾರೆ. ಕಾಂಗ್ರೆಸ್‌ಗಿಂತ ಬಿಜೆಪಿ ಮತ್ತು ಮೋದಿ ಯವರೇ ಹೆಚ್ಚಿನ ಅಂಕ ಪಡೆದು ಕೊಂಡಿದ್ದಾರೆ. ಮೋದಿ ಪರ ಶೇ.88, ರಾಹುಲ್ ಪರ ಶೇ.58, ಸೋನಿಯಾ ಪರ ಶೇ.57 ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ಶೇ.84, ಕಾಂಗ್ರೆಸ್‌ಗೆ ಶೇ.59, ಆಪ್‌ಗೆ ಶೇ.34 ಜನಾಭಿಪ್ರಾಯ ವ್ಯಕ್ತವಾಗಿದೆ.
ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರದ ಮೇಲೆ, ಪ್ರಜಾಪ್ರಭುತ್ವದ ಮೇಲೆ ಜನರ ವಿಶ್ವಾಸ ವೃದ್ಧಿಸಿದೆ. ಅದುವೇ ಪ್ಯೂ ಸಂಶೋಧನೆಯಲ್ಲಿ ವ್ಯಕ್ತವಾಗಿದೆ.
– ಅಮಿತ್ ಶಾ, ಬಿಜೆಪಿ ಅಧ್ಯಕ್ಷ