ಬೆಂಗಳೂರು: ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯನ್ನು ಜೋಕ್ ಎಂದು ಅಪಹಾಸ್ಯ ಮಾಡುವ ಪ್ರಧಾನಿ ನರೇಂದ್ರ ಮೋದಿ ವಿಕೃತ ಸಂತೋಷಿಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೂವರೆ ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಯಾವುದೇ ಯೋಜನೆಗಳನ್ನು ನೀಡದೆ ಈಗ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವ ಸಾಲ ಮನ್ನಾ ಯೋಜನೆ ಜಾರಿಗೊಳಿಸಿದ್ದರೆ, ಅದನ್ನುಅಪಹಾಸ್ಯ ಮಾಡುತ್ತಿದ್ದಾರೆ. ಇಂತಹ ವಿಕೃತ ಮನಸ್ಥಿತಿಯ ಪ್ರಧಾನಿಯವರನ್ನು ಏನೆಂದು ಕರೆಯಬೇಕೆಂದು ಪ್ರಶ್ನಿಸಿದರು.
ಕರ್ನಾಟಕ ಸರ್ಕಾರ ಸಾಲಮನ್ನಾ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದಿದೆ. ರಾಜ್ಯ ಸರ್ಕಾರದ ವ್ಯವಸ್ಥಿತ ಯೋಜನೆಯ ಬಗ್ಗೆ ಕೇಂದ್ರ ಸರ್ಕಾದ ಅಧಿಕಾರಿಗಳೇ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಧಾನಿ ಮೋದಿಯವರು ಒಂದು ದಿನ ಕನಿಷ್ಠ ಎರಡು ಗಂಟೆ ಬೆಂಗಳೂರಿಗೆ ಬಂದರೆ, ಸಾಲ ಮನ್ನಾ ಯೋಜನೆ ಮಾಹಿತಿ ನೀಡುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಪ್ರಧಾನಿಯವರನ್ನು ಒಂದು ದಿನ ರಾಜ್ಯಕ್ಕೆ ಕರೆದುಕೊಂಡು ಬರಲಿ ವಿವರ ನೀಡುತ್ತೇವೆ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 22 ಲಕ್ಷ ರೈತರ 8165 ಕೋಟಿ ರೂ. ಸಾಲಮನ್ನಾ ಮಾಡಿದಾಗ ರೈತರಿಗೆ ಲಾಲಿಪಪ್ ನೀಡಿದ್ದಾರೆ ಎಂದು ಲೇವಡಿ ಮಾಡಿದ್ದರು. ಈಗ ಸಮ್ಮಿಶ್ರ ಸರ್ಕಾರ 44 ಲಕ್ಷ ರೈತರ 40 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ.
ಇದನ್ನೂ ಲಾಲಿಪಪ್ ಎಂದರೆ, ನೀವು ರೈತರಿಗೆ ಏನು ಮಾಡಿದ್ದೀರಿ?. ರಾಜ್ಯ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿರುವುದನ್ನು ನೋಡಿ ಪ್ರಧಾನಿಗೆ ಸಹಿಸಲು ಆಗುತ್ತಿಲ್ಲ. ಈ ರೀತಿ ಲೇವಡಿ ಮಾಡುವ ನೀಚ ಪ್ರಧಾನಿಯನ್ನು ಯಾವತ್ತೂ ನೋಡಿರಲಿಲ್ಲ ಎಂದು ಖಾರವಾಗಿ ನುಡಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಿ ಅವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ನೀವು ಪ್ರಧಾನಿಯಾಗಿ ಯಾವ ರೈತರ ಮನೆಗೆ ಹೋಗಿದ್ದೀರಿ, ನಿಮ್ಮ ಕಾಳಜಿ ಏನಿದೆ ಎಂದು ಟೀಕಿಸಿದರು.