ಕುಂದಾಪುರ: ರಾಜ್ಯ ಪ್ರವಾಸ ನಿಮಿತ್ತ ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಭೋಜನ ಕೂಟಕ್ಕೆ ಸಿಹಿತಿಂಡಿ ತಯಾರಿಸಿದ್ದು ನೆಂಪುವಿನ ನರಸಿಂಹ ಪೂಜಾರಿ.
ಬೆಂಗಳೂರಿನ ಗಾಂಧಿ ಬಜಾರಿನ ಎ.ವಿ.ಎಸ್. ನಾಗರಾಜ್ ತೀರ್ಥಹಳ್ಳಿ ಅವರಿಗೆ ಸೇರಿದ ಕ್ಯಾಟರಿಂಗ್ ಸಂಸ್ಥೆಯಲ್ಲಿ ಕಳೆದ 20 ವರ್ಷಗಳಿಂದ ಉದ್ಯೋಗಿಯಾಗಿರುವ ನರಸಿಂಹ ಪೂಜಾರಿ ಅವರಿಗೆ ಮೋದಿ ಅವರ ಮೈಸೂರು ಅರಮನೆಯ ಔತಣ ಕೂಟಕ್ಕೆ ಮೈಸೂರು ಪಾಕ್ ತಯಾರಿ ಸುವ ಜವಾಬ್ದಾರಿ ದೊರೆತಿತ್ತು.
ಇದು ಹೆಮ್ಮೆಯ ಕ್ಷಣ ಎನ್ನುವ ಅವರು ಊಟದ ಬಳಿಕ ಪ್ರಧಾನಿ ಏನು ಪ್ರತಿಕ್ರಿಯಿಸಿದರು ಎಂದು ತಿಳಿಯಲಿಲ್ಲ. ಏಕೆಂದರೆ ಪ್ರಧಾನಿ ಅವರ ಭೋಜನ ಕೂಟ ಎಂದಾಗ ಹತ್ತಾರು ಬಗೆಯ ಖಾದ್ಯಗಳಿರುತ್ತವೆ. ಬೇರೆ ಬೇರೆ ಸಿಹಿತಿನಿಸುಗಳಿರುತ್ತವೆ.
ನಮ್ಮ ತಂಡಕ್ಕೆ 20 ಬಗೆಯ ಖಾದ್ಯಗಳನ್ನು ಮಾಡಿಕೊಡಲು ಆದೇಶ ಇತ್ತು. ಅವರು ಯಾವುದನ್ನು ಎಷ್ಟು ಸವಿದರು ಎನ್ನುವುದು ನಮಗೆ ತಿಳಿಯುವುದಿಲ್ಲ. ಹಾಗಾಗಿ ಪ್ರತ್ಯೇಕವಾಗಿ ನಮ್ಮ ತಿನಿಸಿನ ಕುರಿತಾಗಿ ಅವರ ಅಭಿಪ್ರಾಯ ಪಡೆಯಲಿಲ್ಲ ಎಂದು “ಉದಯವಾಣಿ’ಗೆ ಪ್ರತಿಕ್ರಿಯಿಸಿದರು.
ಮೋದಿ ಅವರ ಭೋಜನಕ್ಕೆ ಬೇರೆ ಬೇರೆ ಕಡೆಗಳಿಂದ ಖಾದ್ಯ ಸಿದ್ಧಪಡಿಸಲು ಸೂಚನೆ ಬಂದಿತ್ತು. ನಮ್ಮ ಸಂಸ್ಥೆ ಭೋಜನ ಸಿದ್ಧಪಡಿಸಿ ಅವರಿಗೆ ಉಣಬಡಿಸಿದೆ. ಪ್ರಧಾನಿ ಜತೆಗೆ ನಮ್ಮ ಸಂಸ್ಥೆಯ ಸದಸ್ಯರಿಗೆ ಫೋಟೋ ತೆಗೆಸಿಕೊಳ್ಳಲೂ ಅವಕಾಶ ದೊರೆತಿದೆ. ನಾನು ಅಡುಗೆ ತಂಡದಲ್ಲಿ ಇದ್ದ ಕಾರಣ ಫೋಟೋ ತೆಗೆಸಿಕೊಳ್ಳಲಾಗಲಿಲ್ಲ ಎನ್ನುತ್ತಾರೆ ನರಸಿಂಹ ಪೂಜಾರಿ ಅವರು.