ವಾಷಿಂಗ್ಟನ್: ನೆರೆರಾಷ್ಟ್ರಗಳಾದ ಪಾಕಿಸ್ಥಾನ ಹಾಗೂ ಚೀನದ ಗಡಿ ತಂಟೆಗಳ ನಡುವೆ ದೇಶದ ಮೂರೂ ಸೇನೆಗಳ ಸಾಮರ್ಥ್ಯ ಹೆಚ್ಚಿಸುವ ಸವಾಲು ಭಾರತಕ್ಕಿದ್ದು, ಆ ನಿಟ್ಟಿನಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ಮಹತ್ವ ಪಡೆದಿದೆ.
ಪ್ರಿಡೇಟರ್ ಡ್ರೋನ್ ಖರೀದಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಗುರುವಾರ ಮೋದಿ ಅವರು ಸಶಸ್ತ್ರ ಡ್ರೋನ್ ತಯಾರಕ ಕಂಪೆನಿ ಜನರಲ್ ಅಟೋಮಿಕ್ಸ್ ಸಿಇಒ ವಿವೇಕ್ ಲಾಲ್ ಜತೆ ಮಾತುಕತೆ ನಡೆಸಿದ್ದಾರೆ. ಅಮೆರಿಕದ ಜತೆ ಪ್ರಮುಖ ರಕ್ಷಣ ಒಪ್ಪಂದ ಮಾಡಿಕೊಳ್ಳುವುದು ಈ ಸಭೆಯ ಅಜೆಂಡಾ ಆಗಿತ್ತು.
3 ಶತಕೋಟಿ ಡಾಲರ್ ವೆಚ್ಚದಲ್ಲಿ 30 ಡ್ರೋನ್‌ಗಳನ್ನು ಖರೀದಿಸುವ ಕುರಿತು ವಿವೇಕ್ ಲಾಲ್ ಜತೆ ಮೋದಿ ಮಾತನಾಡಿದ್ದಾರೆ. ನೆರೆರಾಷ್ಟ್ರ ಪಾಕಿಸ್ಥಾನವು ಚೀನ ನಿರ್ಮಿತ ಸಶಸ್ತ್ರ ಡ್ರೋನ್‌ಗಳನ್ನು ಬಳಸುತ್ತಿದ್ದು, ಟರ್ಕಿಯಿಂದಲೂ ಇನ್ನಷ್ಟು ಡ್ರೋನ್ ಖರೀದಿಗೆ ಸಿದ್ಧತೆ ನಡೆಸಿದೆ. ಅಲ್ಲದೇ ಡ್ರೋನ್‌ಗಳ ಮೂಲಕ ಭಾರತದ ಗಡಿಯೊಳಗೆ ಶಸ್ತ್ರಾಸ್ತ್ರ ರವಾನಿಸುವ ಕುಕೃತ್ಯವನ್ನೂ ಪಾಕ್ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ನಮ್ಮ ನೆಲ, ಜಲ, ವಾಯುಪ್ರದೇಶಗಳನ್ನು ಕಾಯ್ದುಕೊಳ್ಳಲು ಸಮರ್ಥ ವ್ಯವಸ್ಥೆಯ ಅಗತ್ಯವಿದೆ.
ಈಗಾಗಲೇ ಭಾರತೀಯ ನೌಕಾಪಡೆಯು ಎರಡು ಪ್ರಿಡೇಟರ್ ಎಂಕ್ಯೂ-9 ಡ್ರೋನ್‌ಗಳನ್ನು ಬಳಸಿಕೊಳ್ಳುತ್ತಿದೆ. ಗಲ್ಫ್ ಆಫ್ ಏಡೆನ್‌ನಿಂದ ಇಂಡೋನೇಷ್ಯಾದ ಲೊಂಬಾಕ್ ಸ್ಟ್ರೈಟ್ಸ್‌ವರೆಗೆ ನೌಕಾ ಜಾಗೃತಿಗಾಗಿ ಇದನ್ನು ಬಳಸಿ ಕೊಳ್ಳಲಾಗುತ್ತಿದೆ. ನೌಕಾಪಡೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಗುರಿ ಸರಕಾರಕ್ಕಿದ್ದು, ಅದಕ್ಕಾಗಿ 30 ಪ್ರಿಡೇಟರ್ ಡ್ರೋನ್‌ಗಳನ್ನು ಖರೀದಿಸಲು ಮುಂದಾಗಿದೆ. ನೆಲದಿಂದ ಆಗಸದಲ್ಲಿನ ಗುರಿ ಛೇದಿಸಬಲ್ಲ 7 ಕ್ಷಿಪಣಿಗಳು ಅಥವಾ ಲೇಸರ್ ಗೈಡೆಡ್ ಬಾಂಬ್‌ಗಳನ್ನು ಹೊರುವ ಸಾಮರ್ಥ್ಯ ಪ್ರಿಡೇಟರ್‌ನಲ್ಲಿದೆ. ಅಲ್ಲದೇ, ಈ ಡ್ರೋನ್ 50 ಸಾವಿರ ಅಡಿ ಎತ್ತರದಲ್ಲಿ ಸುಮಾರು 27 ಗಂಟೆಗಳ ಕಾಲ ಹಾರಾಟ ನಡೆಸಬಲ್ಲದು. ಗುಪ್ತಚರ, ಕಣ್ಗಾವಲಿಗೂ ಇದನ್ನು ಬಳಸಬಹುದಾಗಿದೆ.
ಯುಎನ್‌ಜಿಎಯಿಂದ ತಾಲಿಬಾನ್ ದೂರ: ಪ್ರಸ್ತುತ ಅಫ್ಘಾನಿಸ್ಥಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಈ ಬಾರಿಯ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ. ಸೆ.27ರಂದು ಯುಎನ್‌ಜಿಎಯಲ್ಲಿ ಭಾಷಣ ಮಾಡುವ ಅವಕಾಶ ಅಫ್ಘಾನ್‌ಗೆ ಲಭ್ಯವಾಗಿದೆ. ಆದರೆ ತಾಲಿಬಾನ್ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ತ್ರಿಪಕ್ಷೀಯ ಮೈತ್ರಿಕೂಟದಲ್ಲಿ ಭಾರತ, ಜಪಾನ್‌ಗಿಲ್ಲ ಸ್ಥಾನ!:
ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ 21ನೇ ಶತಮಾನದ ಆವಶ್ಯಕತೆಗೆ ತಕ್ಕಂತೆ ರಣತಂತ್ರ ರೂಪಿಸುವ ಸಲುವಾಗಿ, ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳು ಮಾಡಿಕೊಂಡಿ ರುವ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟದಲ್ಲಿ (ಆಕಸ್) ಭಾರತ ಮತ್ತು ಜಪಾನ್‌ನನ್ನು ಸೇರಿಸಿಕೊಳ್ಳಲಾಗದು ಎಂದು ಅಮೆರಿಕ ಖಡಾಖಂಡಿತವಾಗಿ ಹೇಳಿದೆ. ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟ ಸ್ಥಾಪನೆ ಬಗ್ಗೆ ಸೆ. 15ರಂದು ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಹಾಗೂ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಜಂಟಿಯಾಗಿ ಘೋಷಣೆ ಮಾಡಿದ್ದರು. ಇದರನ್ವಯ, ಆಸ್ಟ್ರೇಲಿಯಾಕ್ಕೆ ಪರಮಾಣು ಚಾಲಿತ ಜಲಾಂತ ರ್ಗಾಮಿಗಳನ್ನು ನೀಡುವುದಾಗಿ ಅಮೆರಿಕ ಘೋಷಿಸಿತ್ತು. ಮತ್ತೂಂದೆಡೆ, ಚೀನದ ಪಾರುಪತ್ಯ ಹತ್ತಿಕ್ಕುವ ಸಲುವಾಗಿ ಈಗಾಗಲೇ ಅಮೆರಿಕ ನೇತೃತ್ವದಲ್ಲಿ ಕ್ವಾಡ್ ಒಕ್ಕೂಟ ರಚನೆಯಾಗಿದೆ.
ಇಂದು, ನಾಳೆ ಏನೇನು ಕಾರ್ಯಕ್ರಮ?:
- ಶುಕ್ರವಾರ ಶ್ವೇತಭವನದಲ್ಲಿ
- ಅಮೆರಿಕ ಅಧ್ಯಕ್ಷ ಬೈಡೆನ್‌ರೊಂದಿಗೆ ದ್ವಿಪಕ್ಷೀಯ ಮಾತುಕತೆ
- ಕ್ವಾಡ್ ಶೃಂಗಸಭೆಯಲ್ಲಿ ಭಾಗಿ.
- ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮೋದಿ ಭಾಷಣ