ನವದೆಹಲಿ : ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಕುರಿತು ವ್ಯಂಗ್ಯವಾಡಿದ್ದಾರೆ.
ಇತ್ತೀಚಿಗಷ್ಟೆ ಕೋವಿಡ್‌ನಿಂದ ಮೃತಪಟ್ಟವರ ಕುರಿತು ಮಾತನಾಡುವಾಗ ಮೋದಿಯವರು ಕಣ್ಣೀರಿಟ್ಟಿದ್ದರು.
ವಾರಾಣಸಿಯಲ್ಲಿನ ವೈದ್ಯರು ಮತ್ತು ಮುಂಚೂಣಿ ಕಾರ್ಯಕರ್ತರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್‌ನಿಂದ ಮೃತಪಟ್ಟವರ ಕುರಿತು ಮಾತನಾಡುವ ಸಂದರ್ಭದಲ್ಲಿ ಭಾವುಕರಾದರು.
ಕೋವಿಡ್ ಸಾಂಕ್ರಾಮಿಕ ಸ್ಥಿತಿಯನ್ನು ನಿಭಾಯಿಸುತ್ತಿರುವ ಬಗೆಯ ವಿಚಾರವಾಗಿ ವಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗುತ್ತಿರುವ ಪ್ರಧಾನಿ ಮೋದಿ, ಕೋವಿಡ್‌ನಿಂದ ಜನರು ಸಾವಿಗೀಡಾಗುತ್ತಿರುವುದನ್ನು ಪ್ರಸ್ತಾಪಿಸಿ ಗದ್ಗದಿತರಾದರು.
ಮೋದಿಯವರು ಭಾವುಕರಾಗಿರುವುದನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಟೀಕಿಸಿವೆ. ಇದು ಮೊಸಳೆ ಕಣ್ಣೀರು ಎಂದು ವ್ಯಂಗ್ಯವಾಡಿವೆ. ಇದೀಗ ಬಾಲಿವುಡ್ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಅಣುಕಿಸಿದ್ದಾರೆ. ಮೋದಿಯವರಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕೆಂದು ಕಾಲೆಳೆದಿದ್ದಾರೆ.
ಆಸ್ಕರ್ ಪ್ರಶಸ್ತಿ ನೀಡುತ್ತಿರುವ ಕಾರ್ಯಕ್ರಮದ ಜೊತೆ ಮೋದಿ ಭಾವುಕರಾದ ದೃಶ್ಯಗಳನ್ನು ಜೋಡಿಸಿ ಎಡಿಟ್ ಮಾಡಲಾದ ವಿಡಿಯೋ ಕ್ಲಿಪ್ ವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಆರ್ ಜಿವಿ, ‘THE BEST OSCAR EVER’ ಎಂದು ಬರೆದುಕೊಂಡಿದ್ದಾರೆ.